29
ಫಿಲಿಷ್ಟಿಯ ಪ್ರಭುಗಳು ದಾವೀದನನ್ನು ತಿರಸ್ಕರಿಸಿದ್ದು
ಫಿಲಿಷ್ಟಿಯರು ತಮ್ಮ ಸೈನ್ಯವನ್ನು ಕೂಡಿಸಿಕೊಂಡು ಬಂದು ಅಫೇಕಿನಲ್ಲಿ ಪಾಳೆಯಮಾಡಿಕೊಂಡರು. ಇಸ್ರಾಯೇಲರು ಇಜ್ರೇಲಿನ ಬೈಲಿನಲ್ಲಿರುವ ಬುಗ್ಗೆಯ ಬಳಿಯಲ್ಲಿ ಇಳಿದುಕೊಂಡರು. ಫಿಲಿಷ್ಟಿಯ ಪ್ರಭುಗಳ ಸೈನಿಕರು ನೂರು ನೂರು ಮಂದಿಯಾಗಿಯೂ, ಸಾವಿರ ಸಾವಿರ ಮಂದಿಯಾಗಿ, ಬರುತ್ತಿರುವಾಗ ದಾವೀದನು ಅವನ ಜನರ ಸಹಿತವಾಗಿ ಆಕೀಷನ ಸಂಗಡ ಹಿಂಬಾಲಿಸುತ್ತಿದ್ದನು. ಆಗ ಫಿಲಿಷ್ಟಿಯ ಪ್ರಭುಗಳು, “ಈ ಇಬ್ರಿಯರು ಯಾಕೆ?” ಎಂದು ಆಕೀಷನನ್ನು ಕೇಳಿದರು. ಅವನು ಅವರಿಗೆ, “ಇವನು ಇಸ್ರಾಯೇಲರ ಅರಸನಾದ ಸೌಲನ ಸೇವಕ ದಾವೀದನಲ್ಲವೋ, ಇವನು ಇಷ್ಟು ವರ್ಷ, ಇಷ್ಟು ದಿನಗಳಿಂದ ನನ್ನ ಬಳಿಯಲ್ಲಿದ್ದಾನೆ. ಸೌಲನನ್ನು ಬಿಟ್ಟು ನನ್ನ ಹತ್ತಿರ ಬಂದ ದಿನ ಮೊದಲುಗೊಂಡು ಇಂದಿನವರೆಗೂ ನಾನು ಇವನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ” ಎಂದು ಉತ್ತರಕೊಟ್ಟನು. ಆದರೆ ಫಿಲಿಷ್ಟಿಯ ಪ್ರಭುಗಳು ಅವನ ಮೇಲೆ ಕೋಪಗೊಂಡು ಅವನಿಗೆ, “ಈ ಮನುಷ್ಯನನ್ನು ಕಳುಹಿಸಿಬಿಡು, ಇವನು ಹಿಂದಿರುಗಿ ಹೋಗಿ ನೀನು ನೇಮಿಸಿದ ಸ್ಥಳದಲ್ಲೇ ವಾಸಿಸಲಿ. ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು. ಬಂದರೆ ನಮಗೆ ಶತ್ರುವಾಗಿ ನಿಂತಾನು, ಫಿಲಿಷ್ಟಿಯರ ತಲೆಗಳನ್ನು ಕಡಿದಿದ್ದರಿಂದಲೇ ಇವನು ತನ್ನ ಯಜಮಾನನ ಮೆಚ್ಚಿಕೆಯನ್ನು ಪಡೆಯಬಹುದಲ್ಲವೇ? ‘ಸೌಲನು ಸಾವಿರಾರು ಶತ್ರುಗಳನ್ನು ಕೊಂದನು. ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು’ ಎಂದು ಸ್ತ್ರೀಯರು ಕುಣಿಯುತ್ತಾ ಹಾಡಿದ್ದು ಈ ದಾವೀದನನ್ನು ಕುರಿತೇ ಅಲ್ಲವೇ?” ಅಂದರು.
ಆಗ ಆಕೀಷನು ದಾವೀದನನ್ನು ಕರೆದು ಅವನಿಗೆ, “ಯೆಹೋವನಾಣೆ ನೀನು ಯಥಾರ್ಥನು. ನೀನು ನನ್ನ ಸಂಗಡ ಪಾಳೆಯದಲ್ಲಿದ್ದುಕೊಂಡು ಯುದ್ಧಕ್ಕೆ ಹೋಗುತ್ತಾ ಬರುತ್ತಾ ಇರುವುದು ಯುಕ್ತವೆಂದು ನನಗೆ ತೋರಿತು. ನೀನು ಬಂದಂದಿನಿಂದ ಇಂದಿನವರೆಗೂ ನಾನು ನಿನ್ನಲ್ಲಿ ಯಾವ ದೋಷವನ್ನೂ ಕಾಣಲಿಲ್ಲ. ಆದರೆ ಪ್ರಭುಗಳು ನಿನ್ನನ್ನು ಮೆಚ್ಚುವುದಿಲ್ಲ. ಆದ್ದರಿಂದ ನೀನು ಸಮಾಧಾನದಿಂದ ಹಿಂದಿರುಗಿ ಹೋಗು ಅವರನ್ನು ಸಿಟ್ಟುಗೊಳಿಸಬಾರದು” ಎಂದು ಹೇಳಿದನು. ದಾವೀದನು ಆಕೀಷನಿಗೆ, “ನಾನೇನು ಮಾಡಿದೆನು? ನಿನ್ನ ದಾಸನಾದ ನಾನು ನಿನ್ನ ಬಳಿಗೆ ಬಂದ ದಿನದಿಂದ ಇಂದಿನವರೆಗೂ ನನ್ನಲ್ಲಿ ಯಾವ ಅಪರಾಧವನ್ನು ಕಂಡಿ? ಅರಸನಾದ ನನ್ನ ಒಡೆಯನ ಜೊತೆಯಲ್ಲಿ ಹೋಗಿ, ಅವನ ಶತ್ರುಗಳೊಡನೆ ನಾನೇಕೆ ಯುದ್ಧ ಮಾಡಬಾರದು?” ಅಂದನು. ಆಗ ಆಕೀಷನು ದಾವೀದನಿಗೆ, “ನೀನು ಒಳ್ಳೆಯವನೆಂದು ನನಗೆ ಗೊತ್ತದೆ, ನನ್ನ ದೃಷ್ಟಿಯಲ್ಲಿ ನೀನು ದೇವದೂತನಂತಿರುತ್ತೀ. ಆದರೆ ಫಿಲಿಷ್ಟಿಯ ಪ್ರಭುಗಳು, ‘ಇವನು ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಹೊರಡಬಾರದು’ ಎಂದು ಹೇಳುತ್ತಾರಲ್ಲಾ. 10 ಆದುದ್ದರಿಂದ ನೀನೂ, ನಿನ್ನ ಸಂಗಡ ಬಂದ ನಿನ್ನ ಒಡೆಯನ ಸೇವಕರೂ, ನಾಳೆ ಬೆಳಿಗ್ಗೆ ಎದ್ದು ಹೊತ್ತು ಮೂಡಿದ ಕೂಡಲೆ ಹಿಂದಿರುಗಿ ಹೋಗಿರಿ” ಎಂದು ಹೇಳಿದನು. 11 ದಾವೀದನು ತನ್ನ ಜನರೊಡನೆ ಬೆಳಿಗ್ಗೆ ಎದ್ದು ಹಿಂದಿರುಗಿ ಫಿಲಿಷ್ಟಿಯರ ದೇಶಕ್ಕೆ ಹೊರಟನು. ಫಿಲಿಷ್ಟಿಯರು ಇಜ್ರೇಲಿಗೆ ಹೋದರು.