2
ಶ್ರೇಷ್ಠವಾದ ರಕ್ಷಣೆ
1 ಆದ್ದರಿಂದ ನಾವು ಕೇಳಿದ ಸಂಗತಿಗಳಿಗೆ ತಪ್ಪಿಹೋಗದಂತೆ ಅವುಗಳಿಗೆ ಹೆಚ್ಚಾಗಿ ಲಕ್ಷ್ಯಕೊಡುವವರಾಗಿರಬೇಕು. 2 ಯಾಕೆಂದರೆ, ದೇವದೂತರ ಮೂಲಕ ಹೇಳಲ್ಪಟ್ಟ ಸಂದೇಶವು ಸ್ಥಿರವಾಗಿರಲು, ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪಿಗೂ ಮತ್ತು ಅವಿಧೇಯತ್ವಕ್ಕೂ ಶಿಕ್ಷಾರ್ಹವಾದ ಪ್ರತಿಫಲ ಹೊಂದಿದ್ದರು. 3 ನಮ್ಮ ಮುಂದಿಟ್ಟಿರುವ ಈ ಅತ್ಯಂತ ಶ್ರೇಷ್ಠವಾದ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಇದು ಕರ್ತನಿಂದ ಮೊದಲು ಹೇಳಲ್ಪಟ್ಟಿತು ಮತ್ತು ಆತನಿಂದ ಕೇಳಿದವರು ಇದನ್ನು ನಮಗೆ ದೃಢಪಡಿಸಿಕೊಟ್ಟರು. 4 ಸೂಚಕ ಕಾರ್ಯಗಳಿಂದಲೂ, ಅದ್ಭುತಕಾರ್ಯಗಳಿಂದಲೂ, ನಾನಾ ವಿಧವಾದ ಮಹತ್ಕಾರ್ಯಗಳಿಂದಲೂ ಮತ್ತು ತನ್ನಿಚ್ಛೆಯಂತೆ ಪವಿತ್ರಾತ್ಮವರಗಳನ್ನು ನೀಡುವುದರ ಮೂಲಕವೂ ದೇವರು ತಾನೇ ಅದನ್ನು ಸಾಕ್ಷಿಕರಿಸಿದನು.
ನಮ್ಮನ್ನು ರಕ್ಷಣೆಗೆ ನಡಿಸುವಾತನು
5 ನಾವು ಪ್ರಸ್ತಾಪಿಸುತ್ತಿರುವ ಭವಿಷ್ಯತ್ತಿನ ಲೋಕವನ್ನು ದೇವರು ತನ್ನ ದೇವದೂತರಿಗೆ ಅಧೀನ ಮಾಡಿಕೊಡಲಿಲ್ಲ.
6 “ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಪಿಸಿಕೊಳ್ಳಬೇಕು?
ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?
7 ನೀನು ಮನುಷ್ಯನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಉಂಟುಮಾಡಿದ್ದಿಯಲ್ಲಾ.
ಮಹಿಮೆಯನ್ನೂ ಗೌರವವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದೀ.
8 ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದ್ದೀಯಲ್ಲವೇ”
ಎಂದು ಪವಿತ್ರಶಾಸ್ತ್ರದಲ್ಲಿ ಒಬ್ಬನು ಒಂದೆಡೆ ಸಾಕ್ಷಿ ಹೇಳಿದನು. ಆತನು ಎಲ್ಲವನ್ನೂ ಮಾನವಕುಲಕ್ಕೆ ಅಧೀನ ಮಾಡಿದ್ದಾನೆಂಬುದರಲ್ಲಿ ಅವನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲವೆಂದು ಹೇಳಿದ ಹಾಗಾಯಿತು. ಆದರೆ ಎಲ್ಲವೂ ಅವನಿಗೆ ಅಧೀನವಾಗಿರುವುದಾಗಿ ನಾವು ಇನ್ನು ಕಂಡಿಲ್ಲ. 9 ಆದರೂ ದೇವದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟವನಾದ ಯೇಸು ಬಾಧೆಯನ್ನುಭವಿಸಿ ಮೃತಪಟ್ಟದ್ದರಿಂದಲೇ ಮಹಿಮೆಯನ್ನೂ ಗೌರವವನ್ನೂ ಕಿರೀಟವಾಗಿ ಹೊಂದಿರುವುದನ್ನು ನಾವು ನೋಡುತ್ತೇವೆ. ಅದಕ್ಕಾಗಿಯೇ ದೇವರ ಕೃಪೆಯಿಂದ ಯೇಸು ಎಲ್ಲರಿಗೋಸ್ಕರ ಮರಣವನ್ನು ಅನುಭವಿಸಿದ್ದಾನೆ. 10 ಸಮಸ್ತವು ಯಾವನಿಗೋಸ್ಕರವೂ ಯಾವನಿಂದಲೂ ಉಂಟಾಯಿತೋ, ಆತನು ಬಹುಮಂದಿ ಪುತ್ರರನ್ನು ಮಹಿಮೆಗೆ ಸೇರಿಸುವುದಕ್ಕಾಗಿ, ಅವರ ರಕ್ಷಣಾನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವುದು ಆತನಿಗೆ ಯುಕ್ತವಾಗಿತ್ತು. 11 ಯಾಕೆಂದರೆ ಪವಿತ್ರಗೊಳಿಸುವವನಿಗೂ ಪವಿತ್ರರಾದವರಿಗೂ ಒಬ್ಬಾತನೇ ಮೂಲ ಆತನು ದೇವರೇ. ಈ ಕಾರಣದಿಂದ ಅವರನ್ನು ಪವಿತ್ರಗೊಳಿಸುವಾತನು ಅವರನ್ನು ಸಹೋದರರೆಂದು ಕರೆಯುವುದಕ್ಕೆ ನಾಚಿಕೆಪಡಲಿಲ್ಲ.
12 “ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು.
ಸಭಾಮಧ್ಯದಲ್ಲಿ ನಿನ್ನನ್ನು ಕೊಂಡಾಡುವೆನು” ಎಂತಲೂ,
13 “ನಾನು ಆತನಲ್ಲಿ ಭರವಸವಿಡುವೆನು” ಎಂತಲೂ, “ಇಗೋ ನಾನು ಮತ್ತು ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಇದ್ದೇವೆ” ಎಂದೂ ಹೇಳುತ್ತಾನೆ.
14 ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳು ಆಗಿರುವುದರಿಂದ ಯೇಸು ಸಹ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಮಾಡುವುದಕ್ಕೂ, 15 ಮರಣ ಭಯದಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು. 16 ನಿಜವಾಗಿಯೂ ಆತನು ದೇವದೂತರಿಗೆ ಸಹಾಯ ಮಾಡುವುದಕ್ಕಾಗಿ ಅಲ್ಲ, ಅಬ್ರಹಾಮನ ಸಂತತಿಯವರಿಗೆ ಸಹಾಯ ಮಾಡುವುದಕ್ಕಾಗಿ ಬಂದನಷ್ಟೆ. 17 ಆದುದರಿಂದ ಆತನು ಎಲ್ಲಾ ವಿಷಯಗಳಲ್ಲಿಯೂ ತನ್ನ ಸಹೋದರರಿಗೆ ಸಮಾನನಾಗುವುದು ಅತ್ಯಗತ್ಯವಾಗಿತ್ತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ, ದೇವರ ಕಾರ್ಯಗಳಲ್ಲಿ ಕರುಣೆಯೂ, ನಂಬಿಕೆಯೂ, ಉಳ್ಳ ಮಹಾಯಾಜಕನಾದನು. 18 ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವುದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡಲು ಶಕ್ತನಾಗಿದ್ದಾನೆ.