4
ಜಗಳಗಂಟಿತನ, ಪ್ರಾಪಂಚಿಕ ಬುದ್ಧಿಯ ವಿಷಯವಾಗಿ ಎಚ್ಚರಿಕೆ
1 ನಿಮ್ಮಲ್ಲಿ ಜಗಳಗಳೂ, ಕಾದಾಟಗಳೂ ಎಲ್ಲಿಂದ ಬರುತ್ತವೆ? ನಿಮ್ಮ ಇಂದ್ರಿಯಗಳಲ್ಲಿ
*ಹೋರಾಡುವ ದುರಾಶೆಗಳಿಂದ ಬರುತ್ತವಲ್ಲವೇ?
2 ನೀವು ಬಯಸಿದ್ದು ಹೊಂದದೆ ಇದ್ದೀರಿ. ನೀವು ಕೊಲೆ ಮಾಡಿದರೂ, ಹೊಟ್ಟೆಕಿಚ್ಚುಪಟ್ಟರೂ ಬಯಸಿದ್ದನ್ನು ಸಂಪಾದಿಸಲಾರದೆ ಇದ್ದೀರಿ; ನೀವು ಕಾದಾಡುತ್ತೀರಿ, ಜಗಳವಾಡುತ್ತೀರಿ. ಅದರೂ ನೀವು ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ಪಡೆದುಕೊಳ್ಳಲಾಗುತ್ತಿಲ್ಲ.
3 ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಾಭಿಲಾಷೆಗಳಿಗಾಗಿ ದುರುಪಯೋಗಪಡಿಸಿಕೊಳ್ಳಬೇಕೆಂಬ
†ದುರುದ್ದೇಶದಿಂದ ಬೇಡಿಕೊಳ್ಳುವುದರಿಂದ ನಿಮಗೆ ದೊರೆಯುತ್ತಿಲ್ಲ.
4 ‡ವ್ಯಭಿಚಾರಿಗಳೇ, ಇಹಲೋಕದ ಗೆಳೆತನವು ದೇವರಿಗೆ ಹಗೆತನವೆಂದು ನಿಮಗೆ ತಿಳಿಯದೋ? ಆದ್ದರಿಂದ
§ಲೋಕಕ್ಕೆ ಸ್ನೇಹಿತನಾಗಿರಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.
5 *ದೇವರು ನಮ್ಮಲ್ಲಿ ಇರಿಸಿರುವ ಪವಿತ್ರಾತ್ಮನು ಅಭಿಮಾನತಾಪದಿಂದ ನಮಗೋಸ್ಕರ ಹಂಬಲಿಸುತ್ತಾನೆಂಬ ವೇದೋಕ್ತಿ ಬರಿ ಮಾತೆಂದು ನೀವು ಭಾವಿಸುತ್ತೀರೋ?
6 †ಆತನು ನಮಗೆ ಹೆಚ್ಚಾದ ಕೃಪೆಯನ್ನು ಕೊಡುತ್ತಾನೆ. ಆದುದರಿಂದ, “
‡ದೇವರು ಅಹಂಕಾರಿಗಳಿಗೆ ಎದುರಾಳಿಯಾಗಿದ್ದಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ” ಎಂದು ಧರ್ಮಶಾಸ್ತ್ರವು ಹೇಳುತ್ತದೆ.
7 ಹೀಗಿರಲಾಗಿ ದೇವರಿಗೆ ಅಧೀನರಾಗಿದ್ದು
§ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿ ಹೋಗುವನು.
8 *ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು. ಪಾಪಿಗಳೇ,
†ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ,
‡ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ.
9 §ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗುವನ್ನು ಬಿಟ್ಟು ಗೋಳಾಡಿರಿ. ಸಂತೋಷವನ್ನು ಬಿಟ್ಟು ಶೋಕಿಸಿರಿ.
10 *ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗ ಆತನು ನಿಮ್ಮನ್ನು ಮೇಲಕ್ಕೆತ್ತುವನು.
11 ಸಹೋದರರೇ,
†ಒಬ್ಬರನ್ನೊಬ್ಬರು ನಿಂದಿಸಬೇಡಿರಿ. ಯಾವನಾದರೂ ತನ್ನ ಸಹೋದರನನ್ನು ನಿಂದಿಸಿದರೆ ಅಥವಾ ತನ್ನ ಸಹೋದರನ ವಿಷಯವಾಗಿ
‡ತೀರ್ಪು ಮಾಡಿದರೆ ಅವನು ಧರ್ಮಶಾಸ್ತ್ರವನ್ನು ನಿಂದಿಸಿ ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪು ಮಾಡಿದ ಹಾಗಾಗುವುದು. ಆದರೆ ನೀನು ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪುಮಾಡಿದರೆ ನೀನು ನ್ಯಾಯಾಧಿಪತಿಯೆನಿಸಿಕೊಳ್ಳುವಿಯೇ ಹೊರತು ಅದನ್ನು ಅನುಸರಿಸುವವನಲ್ಲ.
12 §ಧರ್ಮಶಾಸ್ತ್ರವನ್ನು ಕೊಟ್ಟಂಥ ನ್ಯಾಯಾಧಿಪತಿ ಒಬ್ಬನೇ; ಆತನೇ ಉಳಿಸುವುದಕ್ಕೂ
*ನಾಶಮಾಡುವುದಕ್ಕೂ ಸಮರ್ಥನು.
†ಹೀಗಿರುವಾಗ ನಿನ್ನ ನೆರೆಯವನ ವಿಷಯದಲ್ಲಿ ತೀರ್ಪುಮಾಡುವುದಕ್ಕೆ ನೀನು ಯಾರು?
13 ‡“ಈಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರ್ಷವಿದ್ದು ವ್ಯಾಪಾರ ಮಾಡಿ ಲಾಭವನ್ನು ಸಂಪಾದಿಸುತ್ತೇವೆ” ಎನ್ನುವವರೇ ಕೇಳಿರಿ.
14 ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು?
§ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದ್ದೀರಿ.
15 ಆದುದರಿಂದ ನೀವು ಅಂಥ ಮಾತನ್ನು ಬಿಟ್ಟು
*“ಕರ್ತನ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು” ಎಂದು ಹೇಳಬೇಕು.
16 ಆದರೆ ನೀವು ನಿಮ್ಮ ಅಹಂನಿಂದ ಹೊಗಳಿಕೊಳ್ಳುತ್ತೀರಿ.
†ಅಂಥ ಹೊಗಳಿಕೆಯೆಲ್ಲಾ ಕೆಟ್ಟದ್ದೇ.
17 ಹೀಗಿರುವುದರಿಂದ
‡ಒಳ್ಳೆಯದನ್ನು ಮಾಡಬೇಕೆಂದು ಗೊತ್ತಿದರೂ ಅದನ್ನು ಮಾಡದೆ ಇರುವವನು ಪಾಪ ಮಾಡುವವನಾಗಿದ್ದಾನೆ.