28
ಯೇಸುವಿನ ಪುನರುತ್ಥಾನ
ಮಾರ್ಕ 16:1-10; ಲೂಕ 24:1-10; ಯೋಹಾ 20:1-18
1 ಸಬ್ಬತ್ ದಿನ ಆದ ಮೇಲೆ ವಾರದ ಮೊದಲನೆಯ ದಿನ * 28:1 ಪ್ರಾರಂಭವಾಗುವುದಕ್ಕೆ ಸ್ವಲ್ಪ ಹೊತ್ತು ಮಾತ್ರ ಇದ್ದಾಗಬೆಳಗಾಗುತ್ತಿರುವಾಗಲೇ ಮಗ್ದಲದ ಮರಿಯಳೂ ಮತ್ತು ಆ ಬೇರೆ ಮರಿಯಳೂ ಸಮಾಧಿಯನ್ನು ನೋಡಲು ಬಂದರು. 2 ಇಗೋ, ಮಹಾ ಭೂಕಂಪವುಂಟಾಯಿತು, ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕುಳಿತುಕೊಂಡಿದ್ದನು. 3 ಅವನ ಮುಖಭಾವವು ಮಿಂಚಿನಂತೆ ಇತ್ತು. ಅವನ ಉಡುಪು ಹಿಮದಂತೆ ಬೆಳ್ಳಗಿತ್ತು; 4 ಕಾವಲುಗಾರರು ಹೆದರಿ ನಡುಗಿ ಸತ್ತವರ ಹಾಗಾದರು. 5 ಆಗ ದೂತನು ಆ ಹೆಂಗಸರಿಗೆ, “ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು; 6 ಆತನು ಇಲ್ಲಿ ಇಲ್ಲ, ತಾನು ಹೇಳಿದಂತೆಯೇ ಎದ್ದಿದ್ದಾನೆ. ಬನ್ನಿ, ಕರ್ತನು ಮಲಗಿದ್ದ ಸ್ಥಳವನ್ನು ನೋಡಿರಿ; 7 ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ, ‘ಆತನು ಸತ್ತವರೊಳಗಿಂದ ಎದ್ದಿದ್ದಾನೆಂದು, † 28:7 ಮತ್ತಾ 28:10,16; 26:32ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ’ ಎಂದು ತಿಳಿಸಿರಿ; ನೋಡಿರಿ, ನಾನು ನಿಮಗೆ ಹೇಳಿದ್ದೇನೆ,” ಎಂದು ಹೇಳಿದನು. 8 ಅವರು ಭಯದಿಂದಲೂ, ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ಅದನ್ನು ತಿಳಿಸುವುದಕ್ಕೆ ಓಡಿಹೋದರು. 9 ಆಗ ಯೇಸು ಅವರನ್ನು ಭೇಟಿಯಾಗಿ, “ನಿಮಗೆ ಶುಭವಾಗಲಿ” ಅಂದನು. ಅವರು ಹತ್ತಿರಕ್ಕೆ ಬಂದು ಆತನ ಪಾದಗಳಿಗೆ ಅಡ್ಡಬಿದ್ದು ಆತನನ್ನು ಆರಾಧಿಸಿದರು. 10 ಆಗ ಯೇಸು ಅವರಿಗೆ, “ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ಅವರು ನನ್ನನ್ನು ನೋಡುವರು” ಎಂದು ಹೇಳಿದನು.
ಕಾವಲುಗಾರನ ಸುದ್ದಿ
11 ಆಗ ಹೆಂಗಸರು ಹೋಗುತ್ತಿರುವಾಗ, ಇಗೋ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ನಡೆದ ಸಂಗತಿಗಳನ್ನೆಲ್ಲಾ ಮುಖ್ಯಯಾಜಕರಿಗೆ ತಿಳಿಸಿದರು. 12 ಯಾಜಕರು ಹಿರಿಯರ ಸಂಗಡ ಕೂಡಿಕೊಂಡು ಆಲೋಚನೆ ಮಾಡಿ ಆ ಸಿಪಾಯಿಗಳಿಗೆ ಬಹಳ ಹಣಕೊಟ್ಟು, 13 “ ‘ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿದ್ದಾಗ ಅವನ ಮೃತದೇಹವನ್ನು ಕದ್ದುಕೊಂಡು ಹೋದರು’ ಎಂದು ಹೇಳಿರಿ; 14 ಈ ಸುದ್ದಿಯು ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನಪಡಿಸಿ ನಿಮಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ” ಎಂದರು. 15 ಅದರಂತೆ ಕಾವಲುಗಾರರು ಆ ಹಣವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟ ಹಾಗೆಯೇ ಮಾಡಿದರು. ಈ ಮಾತು ಇಂದಿನವರೆಗೂ ಯೆಹೂದ್ಯರಲ್ಲಿ ಹರಡಿಕೊಂಡಿದೆ.
ಯೇಸುವಿನ ಕಡೆಯ ಅಪ್ಪಣೆ
16 ಆದರೆ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ, ಯೇಸು ತಮಗೆ ಗೊತ್ತುಮಾಡಿದ್ದ ಬೆಟ್ಟಕ್ಕೆ ಹೋಗಿ ಸೇರಿದರು. 17 ಅವರು ಅಲ್ಲಿ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು; ಆದರೆ ಕೆಲವರು ಸಂದೇಹಪಟ್ಟರು. 18 ಯೇಸು ಅವರ ಹತ್ತಿರಕ್ಕೆ ಬಂದು, “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. 19 ‡ 28:19 ಮಾರ್ಕ 16:15,16; ಲೂಕ 24:47ಆದುದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ; ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ. 20 ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ. ಹಾಗು§ 28:20 ಮತ್ತಾ 18:20; ಯೋಹಾ 14:18,19ಇಗೋ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿನವೂ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು.