7
ಸೊಲೊಮೋನನು ತನ್ನ ಅರಮನೆಯನ್ನು ಕಟ್ಟಿಸಿದ್ದು
ಇದಲ್ಲದೆ ಸೊಲೊಮೋನನು ತನ್ನ ಅರಮನೆಯನ್ನು ಹದಿಮೂರು ವರ್ಷಗಳಲ್ಲಿ ಕಟ್ಟಿಸಿ ಮುಗಿಸಿದನು. ಅವನು ಲೆಬನೋನಿನ ಅಡವಿಯ ಮನೆಯನ್ನು ಕಟ್ಟಿಸಿದನು. ಅದು 44 ಮೀಟರ್ ಉದ್ದ, 22 ಮೀಟರ್ ಅಗಲ, 13.5 ಮೀಟರ್ ಎತ್ತರವೂ ಆಗಿತ್ತು. ಅದು ನಾಲ್ಕು ಸಾಲು ದೇವದಾರು ಕಂಬಗಳ ಮೇಲೆ ಇತ್ತು. ದೇವದಾರು ತೊಲೆಗಳು ಕಂಬಗಳ ಮೇಲೆ ಇದ್ದವು. ಒಂದೊಂದು ಸಾಲು ಹದಿನೈದು ಕಂಬಗಳಾಗಿ ನಲವತ್ತೈದು ಕಂಬಗಳ ಮೇಲೆ ಇರುವ ತೊಲೆಗಳು ದೇವದಾರಿನ ಹಲಿಗೆಗಳಿಂದ ಮಾಡಿದ ಮಾಳಿಗೆಯಿತ್ತು. ಮೂರು ಸಾಲು ಕಿಟಕಿಗಳು ಇದ್ದವು. ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳಿದ್ದವು. ಕಿಟಕಿಗಳಲ್ಲಿ ಬಾಗಿಲುಗಳೂ, ನಿಲುವುಗಳೂ ಎಲ್ಲಾ ಚೌಕವಾಗಿದ್ದವು. ಮೂರು ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳು ಎದುರೆದುರಾಗಿದ್ದವು.
22 ಮೀಟರ್ ಉದ್ದವೂ, 13.5 ಮೀಟರ್ ಅಗಲವೂ ಆದ ಮಂಟಪವನ್ನು ಸ್ತಂಭಗಳಿಂದ ಮಾಡಿಸಿದನು. ಈ ಮಂಟಪವೂ, ಸ್ತಂಭಗಳೂ, ತೊಲೆಗಳೂ, ಮನೆಯ ಸ್ತಂಭಗಳಿಗೂ, ತೊಲೆಗಳಿಗೂ ಎದುರೆದುರಾಗಿದ್ದವು.
ಅಲ್ಲಿ ನ್ಯಾಯತೀರಿಸಲು ನ್ಯಾಯಾಸನದ ಮಂಟಪವನ್ನು ಮಾಡಿ, ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ದೇವದಾರುಗಳನ್ನು ಹೊದಿಸಿದನು. ತಾನು ವಾಸವಾಗಿರುವ ತನ್ನ ಅರಮನೆಯಲ್ಲಿ ಮಂಟಪದ ಒಳಭಾಗದಲ್ಲಿ ಈ ಕೆಲಸದ ಹಾಗೆಯೇ ಬೇರೆ ಒಂದು ಅಂಗಳವಿತ್ತು. ಇದಲ್ಲದೆ ಸೊಲೊಮೋನನು ತನ್ನ ಹೆಂಡತಿಯಾದ ಫರೋಹನ ಮಗಳಿಗೂ ಈ ಮಂಟಪದ ಹಾಗೆಯೇ ಇನ್ನೊಂದು ಮನೆಯನ್ನು ಕಟ್ಟಿಸಿದನು.
ಇವೆಲ್ಲಾ ಒಳಗೂ, ಹೊರಗೂ ಅಸ್ತಿವಾರಗಳು ಮೊದಲುಗೊಂಡು, ಕಡೇ ವರಸೆಯವರೆಗೂ ಹೊರಗಿರುವ ದೊಡ್ಡ ಅಂಗಳದ ಮಟ್ಟಿಗೂ, ಅಳತೆಯ ಪ್ರಕಾರ ಗರಗಸದಿಂದ ಕೊಯ್ಯಲಾದ ಬೆಲೆಯುಳ್ಳ ಕೆತ್ತಿದ ಕಲ್ಲುಗಳಾಗಿದ್ದವು. 10 ಅಸ್ತಿವಾರವು 4.5 ಮೀಟರ್ ಕಲ್ಲುಗಳೂ, 3.5 ಮೀಟರ್ ಕಲ್ಲುಗಳೂ ಬೆಲೆಯುಳ್ಳ ಕಲ್ಲುಗಳಾಗಿದ್ದವು. ಅವು ದೊಡ್ಡ ಕಲ್ಲುಗಳಾಗಿಯೂ ಇದ್ದವು. 11 ಅದರ ಮೇಲೆ ಕೆತ್ತಿದ ಕಲ್ಲುಗಳ ಅಳತೆಯ ಪ್ರಕಾರ ಬೆಲೆಯುಳ್ಳ ಕಲ್ಲುಗಳೂ, ದೇವದಾರು ತೊಲೆಗಳೂ ಇದ್ದವು. 12 ದೊಡ್ಡ ಅಂಗಳವು ಸುತ್ತಲೂ ಮೂರು ತರ ಕೆತ್ತಿದ ಕಲ್ಲುಗಳೂ, ಒಂದು ತರ ದೇವದಾರು ಮರದ ತೊಲೆಗಳೂ ಆಗಿದ್ದವು. ಯೆಹೋವ ದೇವರ ಆಲಯದ ಒಳ ಅಂಗಳಕ್ಕೂ, ಆಲಯದ ಮಂಟಪಕ್ಕೂ ಹಾಗೆಯೇ ಇದ್ದವು.
ದೇವಾಲಯದ ಉಪಕರಣಗಳು
13 ಅರಸನಾದ ಸೊಲೊಮೋನನು ಹೂರಾಮನನ್ನು ಟೈರಿನಿಂದ ಕರೆಕಳುಹಿಸಿದನು. 14 ಇವನು ನಫ್ತಾಲಿಯ ಗೋತ್ರದವಳಾದ ಒಬ್ಬ ವಿಧವೆಯ ಮಗನು, ಅವನ ತಂದೆ ಟೈರ್ ಪಟ್ಟಣದ ಕಂಚುಗಾರನಾಗಿದ್ದನು. ಹೂರಾಮನು ಜ್ಞಾನದಿಂದಲೂ ಗ್ರಹಿಕೆಯಿಂದಲೂ ತಿಳುವಳಿಕೆಯಿಂದಲೂ ಎಲ್ಲಾ ತರಹದ ಕಂಚಿನ ಕೆಲಸವನ್ನು ಮಾಡುವ ಅನುಭವಶಾಲಿಯಾಗಿದ್ದನು. ಅವನು ಅರಸನಾದ ಸೊಲೊಮೋನನ ಬಳಿಗೆ ಬಂದು, ಅವನ ಕೆಲಸವನ್ನೆಲ್ಲಾ ಮಾಡಿದನು.
15 ಅವನು ಎರಡು ಕಂಚಿನ ಸ್ತಂಭಗಳನ್ನು ಮಾಡಿದನು. ಒಂದೊಂದು ಸ್ತಂಭ 8 ಮೀಟರ್ ಉದ್ದ. ಒಂದೊಂದು ಸ್ತಂಭದ ಸುತ್ತಳತೆ 5.3 ಮೀಟರ್ ನೂಲಳತೆ ಇತ್ತು. 16 ಆ ಸ್ತಂಭಗಳ ಮೇಲೆ ಇರಿಸಲು ಕಂಚಿನ ಎರಕ ಹೊಯ್ದ ಎರಡು ಕುಂಭಗಳನ್ನು ಮಾಡಿದನು. ಒಂದೊಂದು ಕುಂಭವು 2.2 ಮೀಟರ್ ಎತ್ತರವಾಗಿತ್ತು. 17 ಸ್ತಂಭಗಳ ಕೊನೆಯಲ್ಲಿ ಇರುವ ಕುಂಭಗಳಿಗೆ ಜಾಲರಿಯ ಹಾಗೆ ಇರುವ ಹಣತೆಗಳೂ, ಸರಪಣಿಗಳ ಹಾಗಿರುವ ಗೊಂಡೆಗಳೂ ಇದ್ದವು. ಅವು ಒಂದೊಂದು ಕಂಬಕ್ಕೆ ಏಳು ಇದ್ದವು. 18 ಸ್ತಂಭಗಳಿಗೆ ಇನ್ನೂ ಮಾಡಿದ್ದು ಹೇಗೆಂದರೆ, ಕೊನೆಯಲ್ಲಿರುವ ಕುಂಭಗಳನ್ನು ಮುಚ್ಚುವ ಹಾಗೆ ಕುಂಭಗಳೊಳಗೆ ಒಂದೊಂದರಲ್ಲಿ ಜಾಲರಿ ಕೆಲಸದ ಮೇಲೆ ಸುತ್ತಲೂ ಎರಡು ಸಾಲು ದಾಳಿಂಬೆ ಹಣ್ಣುಗಳನ್ನು ಮಾಡಿದನು. 19 ಮಂಟಪದ ಮುಂದಿರುವ, ಆ ಸ್ತಂಭಗಳ ಕೊನೆಯ ಮೇಲಿರುವ ಕುಂಭಗಳು ತಾವರೆ ಪುಷ್ಪಗಳ ಕೃತಿ 2 ಮೀಟರ್ ಎತ್ತರವಾಗಿದ್ದವು. 20 ಎರಡು ಸ್ತಂಭಗಳ ಮೇಲಿರುವ ಕುಂಭಗಳಲ್ಲಿ ಉನ್ನತ ಜಾಲರಿಯ ಕೃತಿಯ ಸಮೀಪದಲ್ಲಿರುವ ಅದರ ಹೊಟ್ಟೆಯ ಎದುರಾಗಿ, ಇನ್ನೂರು ದಾಳಿಂಬೆಗಳು ಸಾಲುಗಳಾಗಿ ಸುತ್ತಲೂ ಇದ್ದವು. ಮತ್ತೊಂದು ಕುಂಭಕ್ಕೂ ಹೀಗೆಯೇ ಇತ್ತು. 21 ಆ ಸ್ತಂಭಗಳನ್ನು ಮಂದಿರದ ಮಂಟಪದ ಮುಂದೆ ನಿಲ್ಲಿಸಿದನು. ಅವನು ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್* 7:21 ಯಾಕೀನ್ ಎಂದರೆ ಅವನು ಸ್ಥಾಪಿಸುವನು ಎಂದೂ, ಎಡಗಡೆಯ ಸ್ತಂಭಕ್ಕೆ ಬೋವಾಜ್ 7:21 ಬೋವಾಜ್ ಎಂದರೆ ಅವನಲ್ಲಿ ಶಕ್ತಿ ಇದೆ ಎಂದೂ ಹೆಸರಿಟ್ಟನು. 22 ಸ್ತಂಭಗಳ ತಲೆಯಲ್ಲಿ ತಾವರೆ ಪುಷ್ಪಗಳ ಕೆಲಸವಾಗಿತ್ತು. ಹೀಗೆ ಸ್ತಂಭಗಳ ಕೃತಿಯು ಮುಗಿಯಿತು.
23 ಅನಂತರ ಅವನು ಸಮುದ್ರಪಾತ್ರೆ ಎಂದು ಕರೆಯಲಾಗುವ ಎರಕದ ದೊಡ್ಡ ಪಾತ್ರೆಯನ್ನು ಮಾಡಿಸಿದನು. ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಸುಮಾರು ನಾಲ್ಕು ಮೀಟರ್. ಅದರ ಎತ್ತರ ಸುಮಾರು ಎರಡು ಮೀಟರ್. ಸುತ್ತಳತೆ ಸುಮಾರು ಹದಿನಾಲ್ಕು ಮೀಟರಾಗಿತ್ತು. 24 ಅದರ ಅಂಚಿನ ಕೆಳಭಾಗದಲ್ಲಿ ಅದರ ಸುತ್ತಲೂ ಅಲಂಕಾರದ ಕಾಯಿಗಳಿದ್ದವು. ಅವು ಒಂದೊಂದು ಮೀಟರಿಗೆ ಹತ್ತರಂತೆ, ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು. ಇದು ಎರಕ ಹೊಯ್ಯುವಾಗ ಅಲಂಕಾರದ ಕಾಯಿಗಳು ಎರಡು ಸಾಲಾಗಿ ಎರಕ ಹೊಯ್ದಿದ್ದವು.
25 ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು. 26 ಅದರ ದಪ್ಪವು ಅಂಗೈ ಅಗಲದಷ್ಟಾಗಿಯೂ, ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ, ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ನಾಲ್ವತ್ತು ನಾಲ್ಕು ಸಾವಿರ ಲೀಟರ್ 7:26 ಸುಮಾರು ಎರಡು ಸಾವಿರ ಬತ್ ನೀರನ್ನು ಹಿಡಿಯುತ್ತಿತ್ತು.
27 ಅವನು ಹತ್ತು ಕಂಚಿನ ಚಲಿಸುವ ಪೀಠಗಳನ್ನು ಮಾಡಿದನು. ಒಂದೊಂದು ಪೀಠವು 1.8 ಮೀಟರ್ ಉದ್ದವೂ, 1.8 ಮೀಟರ್ ಅಗಲವೂ, 1.4 ಮೀಟರ್ ಎತ್ತರವೂ ಆಗಿದ್ದವು. 28 ಆ ಪೀಠಗಳ ಮೇಲಿರುವ ಕೆಲಸ ಹೇಗೆಂದರೆ, ಅವುಗಳಿಗೆ ಅಂಚುಗಳಿದ್ದವು. ಅವು ಅಂಚುಗಳ ಹಲಗೆಗಳ ನಡುವೆ ಇದ್ದವು. 29 ಹಲಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ, ಎತ್ತುಗಳೂ, ಕೆರೂಬಿಗಳೂ ಇದ್ದವು. ಹಲಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು. ಸಿಂಹಗಳಿಗೂ, ಎತ್ತುಗಳಿಗೂ ಕೆಳಭಾಗದಲ್ಲಿ ತೋರಣಗಳು ಅದರ ಸಂಗಡ ಇದ್ದವು. 30 ಒಂದೊಂದು ಪೀಠಕ್ಕೆ ನಾಲ್ಕು ಕಂಚಿನ ಗಾಲಿಗಳೂ, ಕಂಚಿನ ಅಚ್ಚುಗಳೂ ಇದ್ದವು. ಅದರ ನಾಲ್ಕು ಮೂಲೆಗಳಿಗೂ ಹೂಗಳ ತೋರಣಗಳ ಜೋಡಣೆಗಳಿದ್ದವು. 31 ಅಂಚಿಗೆ ಒಳಗಾದ ಅದರ ಬಾಯಿ ಮೇಲೆ ಒಂದು ಮೊಳ ಉದ್ದವಾಗಿತ್ತು. ಚಕ್ರಾಕಾರವಾಗಿದ್ದ ಈ ಬಾಯಿ ಒಂದೂವರೆ ಮೊಳ ಅಗಲವಾಗಿತ್ತು. ಅದರ ಬಾಯಿಯ ಮೇಲೆ ಚಿತ್ರಗಳಿದ್ದವು. ಅದರ ಚಿತ್ರಗಳು ದುಂಡಾಗಿರದೆ ಚೌಕವಾಗಿದ್ದವು. 32 ಅಂಚುಗಳ ಕೆಳಗೆ ನಾಲ್ಕು ಗಾಲಿಗಳಿದ್ದವು. ಗಾಲಿಗಳ ಅಚ್ಚುಗಳು ಪೀಠದಲ್ಲಿದ್ದವು. ಒಂದೊಂದು ಗಾಲಿಯು ಒಂದೂವರೆ ಮೊಳವಾಗಿತ್ತು. ಗಾಲಿಗಳ ಮೇಲೆ ಇದ್ದ ಕೆಲಸವು ರಥದ ಗಾಲಿಯ ಕೆಲಸದ ಹಾಗೆ ಇತ್ತು. 33 ಅವುಗಳ ಇರುಸುಗಳೂ, ಅಣಸುಗಳೂ, ಚಕ್ರಗಳೂ, ಅವುಗಳ ಕಂಬಿಗಳೂ ಎರಕ ಹೊಯ್ದ ಕಂಚಿನಿಂದ ಮಾಡಲಾಗಿತ್ತು.
34 ಒಂದೊಂದು ಪೀಠದ ನಾಲ್ಕು ಮೂಲೆಗಳಲ್ಲಿ ಅಂಚುಗಳಿದ್ದವು. ಪೀಠದಲ್ಲಿಂದಲೇ ಅಖಂಡವಾಗಿದ್ದವು. 35 ಪೀಠದ ತಲೆಯಲ್ಲಿ 23 ಸೆಂಟಿಮೀಟರ್ ದುಂಡಾದ ಬಾಯಿ ಇತ್ತು. ಪೀಠದ ತಲೆಯ ಮೇಲೆ ಅದರ ಕೈಪಿಡಿಗಳೂ, ಅದರ ಅಂಚುಗಳೂ ಅಖಂಡವಾಗಿದ್ದವು. 36 ಅದರದರ ಪ್ರಮಾಣದ ಪ್ರಕಾರ ಹಲಗೆಗಳ ಕೈಹಿಡಿಗಳ ಮೇಲೆಯೂ ಅಂಚುಗಳ ಮೇಲೆಯೂ ಕೆರೂಬಿ, ಸಿಂಹ ಖರ್ಜೂರ ವೃಕ್ಷಗಳನ್ನು ಚಿತ್ರಿಸಿದನು. ಸುತ್ತಲೂ ಅದರದರ ಪ್ರಮಾಣದ ಪ್ರಕಾರ ಪುಷ್ಪ ತೋರಣಗಳನ್ನು ಚಿತ್ರಿಸಿದನು. 37 ಈ ಪ್ರಕಾರ ಆ ಹತ್ತು ಪೀಠಗಳನ್ನು ಮಾಡಿದನು. ಅವುಗಳಿಗೆಲ್ಲಾ ಒಂದೇ ಎರಕವೂ, ಒಂದೇ ಅಳತೆಯೂ, ಒಂದೇ ಪ್ರಮಾಣವೂ ಇದ್ದವು.
38 ಹತ್ತು ಕಂಚಿನ ತೊಟ್ಟಿಗಳನ್ನು ಮಾಡಿದನು. ಒಂದೊಂದು ತೊಟ್ಟಿಯು 800 ಲೀಟರ್§ 7:38 ಸುಮಾರು 40 ಬತ್ ನೀರು ಹಿಡಿಯುತ್ತಿತ್ತು. ಒಂದೊಂದು ತೊಟ್ಟಿಯು 2 ಮೀಟರ್ ಇದ್ದವು. ಪ್ರತಿಯೊಂದು ಪೀಠಗಳ ಮೇಲೆ ಒಂದೊಂದು ತೊಟ್ಟಿಯನ್ನು ಇಟ್ಟನು. 39 ಆಲಯದ ದಕ್ಷಿಣ ದಿಕ್ಕಿಗೆ ಐದು ಪೀಠಗಳನ್ನೂ, ಆಲಯದ ಉತ್ತರ ದಿಕ್ಕಿಗೆ ಐದು ಪೀಠಗಳನ್ನೂ ಇಟ್ಟನು. ಆದರೆ ಜಲಾಶಯವನ್ನು ಆಲಯದ ದಕ್ಷಿಣ ದಿಕ್ಕಿಗೆ ಅಂದರೆ ಆಲಯದ ಆಗ್ನೇಯ ಮೂಲೆಯಲ್ಲಿ ಇಟ್ಟನು. 40 ಇದಲ್ಲದೆ ಹೂರಾಮನು ಪಾತ್ರೆಗಳನ್ನೂ, ಸಲಿಕೆಗಳನ್ನೂ, ಬಟ್ಟಲುಗಳನ್ನೂ ಮಾಡಿದನು.
ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನು ಒಪ್ಪಿಸಿದ ಎಲ್ಲಾ ಕೆಲಸಗಳನ್ನು ಹೂರಾಮನು ಮಾಡಿ ತೀರಿಸಿದನು:
 
41 ಅವು ಯಾವುವೆಂದರೆ, ಎರಡು ಸ್ತಂಭಗಳು,
ಆ ಸ್ತಂಭಗಳ ಮೇಲಿನ ಎರಡು ಕುಂಭಗಳು,
ಆ ಎರಡು ಕುಂಭಗಳನ್ನು ಮುಚ್ಚುವ ಎರಡು ಜಾಲರಿಗಳು.
42 ಎರಡು ಜಾಲರಿ ಸಾಮಾನುಗಳಿಗೆ ನಾನೂರು ದಾಳಿಂಬೆ ಹಣ್ಣುಗಳು, ಸ್ತಂಭಗಳ ಮೇಲೆ ಇರುವ ಎರಡು ಕುಂಭಗಳನ್ನು ಮುಚ್ಚುವಂತೆ ಒಂದು ಜಾಲರಿ ಸಲಕರಣೆಗಳಿಗೆ ಎರಡು ಸಾಲಿನ ದಾಳಿಂಬೆ ಹಣ್ಣುಗಳು,
43 ಹತ್ತು ಪೀಠಗಳು, ಅವುಗಳ ಮೇಲಿರುವ ಹತ್ತು ತೊಟ್ಟಿಗಳು,
44 ಸಮುದ್ರಪಾತ್ರೆಯು ಅದರ ಕೆಳಗಿರುವ ಹನ್ನೆರಡು ಎತ್ತುಗಳು,
45 ಪಾತ್ರೆಗಳು, ಸಲಿಕೆಗಳು, ಬೋಗುಣಿಗಳು.
 
ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನಿಗೆ ಹೂರಾಮನು ಮಾಡಿದ ಈ ಸಲಕರಣೆಗಳೆಲ್ಲಾ ಹೊಳೆಯುವ ಕಂಚಿನವುಗಳಾಗಿದ್ದವು. 46 ಯೊರ್ದನಿಗೆ ಸೇರಿದ ಬಯಲಾದ ಸುಕ್ಕೋತಿಗೂ, ಚಾರೆತಾನಿಗೂ ನಡುವೆ ಇರುವ ಜೇಡಿಮಣ್ಣಿನ ಅಚ್ಚುಗಳಲ್ಲಿ ಅರಸನು ಅವುಗಳನ್ನು ಎರಕ ಹೊಯ್ಯಿಸಿದನು. 47 ಸೊಲೊಮೋನನು ಮಾಡಿಸಿದ ಈ ಸಲಕರಣೆಗಳೆಲ್ಲಾ ಬಹು ಹೆಚ್ಚಾಗಿದ್ದರಿಂದ ಅವುಗಳನ್ನು ಎಣಿಸದೆ ಬಿಟ್ಟನು, ಹೀಗಾಗಿ ಕಂಚಿನ ತೂಕವು ಎಷ್ಟೆಂದು ನಿರ್ಧರಿಸಲಾಗಲಿಲ್ಲ.
48 ಸೊಲೊಮೋನನು ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳನ್ನು ಮಾಡಿಸಿದನು. ಅವು ಯಾವುವೆಂದರೆ:
 
ಬಂಗಾರದ ಧೂಪವೇದಿಯನ್ನು
ಸಮ್ಮುಖದ ರೊಟ್ಟಿಗಳನ್ನು ಇಡುವುದಕ್ಕೆ ಚಿನ್ನದ ಮೇಜೂ,
49 ಮಹಾಪರಿಶುದ್ಧ ಸ್ಥಳದ ಮುಂಭಾಗದ ಬಲಗಡೆಯಲ್ಲಿ ಐದು, ಎಡಗಡೆಯಲ್ಲಿ ಐದು ಶುದ್ಧ ಬಂಗಾರದ ದೀಪಸ್ತಂಭಗಳೂ,
ಅದರ ಬಂಗಾರದ ಹೂವುಗಳೂ, ದೀಪಗಳೂ, ಚಿಮಟಗಳೂ,
50 ಶುದ್ಧ ಬಂಗಾರದಿಂದ ಕತ್ತರಿಗಳು, ಬೋಗುಣಿಗಳು, ಅಗ್ನಿಪಾತ್ರೆಗಳು, ಅಗ್ಗಿಷ್ಟಿಗೆ ಇವುಗಳನ್ನು ಮಾಡಿಸಿದನು.
ಇದಲ್ಲದೆ ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯ ಬಾಗಿಲುಗಳಿಗೂ, ಮಂದಿರದ ಮನೆಯ ಬಾಗಿಲುಗಳಿಗೂ ಬಂಗಾರದ ಕೀಲುಗಳನ್ನು ಮಾಡಿಸಿದನು.
 
51 ಹೀಗೆಯೇ ಅರಸನಾದ ಸೊಲೊಮೋನನು ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಯಿತು. ಆಗ ಸೊಲೊಮೋನನು ತನ್ನ ತಂದೆ ದಾವೀದನು ಪ್ರತಿಷ್ಠೆ ಮಾಡಿದ ಬೆಳ್ಳಿಯನ್ನೂ, ಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ ಯೆಹೋವ ದೇವರ ಆಲಯದ ಬೊಕ್ಕಸಗಳಲ್ಲಿ ಇಟ್ಟನು.

*7:21 7:21 ಯಾಕೀನ್ ಎಂದರೆ ಅವನು ಸ್ಥಾಪಿಸುವನು

7:21 7:21 ಬೋವಾಜ್ ಎಂದರೆ ಅವನಲ್ಲಿ ಶಕ್ತಿ ಇದೆ

7:26 7:26 ಸುಮಾರು ಎರಡು ಸಾವಿರ ಬತ್

§7:38 7:38 ಸುಮಾರು 40 ಬತ್