17
ಎಲೀಯನು ದೊಡ್ಡ ಬರವನ್ನು ಘೋಷಿಸಿದ್ದು
ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯ ಊರಿನವನಾದ ಎಲೀಯನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವ ದೇವರ ಜೀವದಾಣೆ, ನನ್ನ ಮಾತಿನ ಪ್ರಕಾರ ಸೂಚಿಸಿದ ಹೊರತು ಇಂದಿನಿಂದ ಕೆಲವು ವರ್ಷಗಳವರೆಗೆ ಮಂಜಾಗಲಿ ಅಥವಾ ಮಳೆಯಾಗಲಿ ಬೀಳುವುದಿಲ್ಲ,” ಎಂದನು.
ಎಲೀಯನಿಗೆ ಕಾಗೆಗಳಿಂದ ಆಹಾರ
ಯೆಹೋವ ದೇವರ ಮಾತು ಅವನಿಗೆ ಉಂಟಾಗಿ, “ನೀನು ಈ ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗಿ, ಯೊರ್ದನಿಗೆ ಎದುರಿಗಿರುವ ಕೆರೀತ್ ಹಳ್ಳದ ಬಳಿಯಲ್ಲಿ ಅಡಗಿಕೊಂಡಿರು. ಅಲ್ಲಿ ನೀನು ಆ ಹೊಳೆಯ ನೀರನ್ನು ಕುಡಿಯುವೆ. ಅಲ್ಲಿ ನಿನಗೆ ಆಹಾರವನ್ನು ತಂದು ಕೊಡಲು ನಾನು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ,” ಎಂದು ಹೇಳಿದನು.
ಅವನು ಹೋಗಿ ಯೆಹೋವ ದೇವರ ಮಾತಿನ ಹಾಗೆಯೇ ಮಾಡಿದನು. ಅವನು ಹೋಗಿ ಯೊರ್ದನಿಗೆ ಎದುರಾಗಿರುವ ಕೆರೀತ್ ಹಳ್ಳದ ಬಳಿಯಲ್ಲಿ ವಾಸವಾಗಿದ್ದನು. ಕಾಗೆಗಳು ಅವನಿಗೆ ಉದಯಕಾಲದಲ್ಲಿ ರೊಟ್ಟಿಯನ್ನೂ, ಮಾಂಸವನ್ನೂ, ಸಂಜೆಯಲ್ಲಿ ರೊಟ್ಟಿಯನ್ನೂ, ಮಾಂಸವನ್ನೂ ತೆಗೆದುಕೊಂಡು ಬಂದವು, ಅವನು ಆ ಹೊಳೆಯ ನೀರನ್ನು ಕುಡಿದನು.
ಚಾರೆಪ್ತಾದ ವಿಧವೆ
ಸ್ವಲ್ಪ ಕಾಲವಾದ ಮೇಲೆ ದೇಶದಲ್ಲಿ ಮಳೆ ಇಲ್ಲದ್ದರಿಂದ ಆ ಹಳ್ಳವು ಬತ್ತಿಹೋಯಿತು. ಯೆಹೋವ ದೇವರ ವಾಕ್ಯವು ಅವನಿಗೆ ಉಂಟಾಗಿ, “ನೀನೆದ್ದು ಸೀದೋನಿಗೆ ಹೊಂದಿದ ಚಾರೆಪತಕ್ಕೆ ಹೋಗಿ ಅಲ್ಲಿ ವಾಸವಾಗಿರು. ನಿನ್ನನ್ನು ಸಂರಕ್ಷಣೆ ಮಾಡಲು ಅಲ್ಲಿರುವ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ,” ಎಂದರು. 10 ಹಾಗೆಯೇ ಅವನೆದ್ದು ಚಾರೆಪತಕ್ಕೆ ಹೋಗಿ, ಪಟ್ಟಣದ ಬಾಗಿಲ ಬಳಿಗೆ ಬಂದಾಗ, ಅಲ್ಲಿ ಒಬ್ಬ ವಿಧವೆಯು ಕಟ್ಟಿಗೆಗಳನ್ನು ಆರಿಸಿಕೊಳ್ಳುತ್ತಾ ಇದ್ದಳು. ಅವನು ಅವಳನ್ನು ಕರೆದು, “ನೀನು ದಯಮಾಡಿ ನನಗೆ ಕುಡಿಯುವುದಕ್ಕೆ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಬಾ,” ಎಂದನು. 11 ಅವಳು ತೆಗೆದುಕೊಂಡು ಬರಲು ಹೋಗುತ್ತಿರುವಾಗ ಅವನು ಅವಳನ್ನು ಕರೆದು, “ನೀನು ದಯಮಾಡಿ ನಿನ್ನ ಕೈಯಲ್ಲಿ ರೊಟ್ಟಿಯ ತುಂಡನ್ನು ನನಗೆ ತೆಗೆದುಕೊಂಡು ಬಾ,” ಎಂದನು.
12 ಅದಕ್ಕೆ ಅವಳು, “ನಿನ್ನ ದೇವರಾದ ಯೆಹೋವ ದೇವರಾಣೆ, ಮಡಕೆಯಲ್ಲಿ ಒಂದು ಹಿಡಿ ಹಿಟ್ಟೂ, ಕುಡಿಕೆಯಲ್ಲಿ ಸ್ವಲ್ಪ ಎಣ್ಣೆಯ ಹೊರತಾಗಿ ನನಗೆ ಬೇರೇನೂ ಇಲ್ಲ. ನಾನೂ, ನನ್ನ ಪುತ್ರನೂ ಅದನ್ನು ತಿಂದು ಸತ್ತು ಹೋಗುವಹಾಗೆ ಅದನ್ನು ನನಗೂ, ಅವನಿಗೂ ಸಿದ್ಧಮಾಡಲು ಎರಡು ಕಟ್ಟಿಗೆಗಳನ್ನು ಕೂಡಿಸಿಕೊಂಡಿದ್ದೇನೆ,” ಎಂದಳು.
13 ಆಗ ಎಲೀಯನು ಅವಳಿಗೆ, “ಭಯಪಡಬೇಡ, ನೀನು ಹೇಳಿದ ಪ್ರಕಾರವೇ ಮಾಡು. ಆದರೆ ಮೊದಲು ಅದರಲ್ಲಿ ನನಗೆ ಒಂದು ಚಿಕ್ಕ ರೊಟ್ಟಿಮಾಡಿ, ನನ್ನ ಬಳಿಗೆ ತೆಗೆದುಕೊಂಡು ಬಾ. ತರುವಾಯ ನಿನಗೂ, ನಿನ್ನ ಮಗನಿಗೂ ಸಿದ್ಧಮಾಡಿಕೋ. 14 ಏಕೆಂದರೆ, ‘ಯೆಹೋವ ದೇವರು ಭೂಮಿಯ ಮೇಲೆ ಮಳೆಯನ್ನು ಕೊಡುವವರೆಗೂ ಮಡಕೆಯಲ್ಲಿರುವ ಹಿಟ್ಟು ತೀರುವುದಿಲ್ಲ. ಕುಡಿಕೆಯಲ್ಲಿರುವ ಎಣ್ಣೆಯು ಮುಗಿಯುವುದಿಲ್ಲ,’ ಎಂದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುತ್ತಾರೆ,” ಎಂದನು.
15 ಆಗ ಅವಳು ಹೋಗಿ ಎಲೀಯನ ಮಾತಿನ ಹಾಗೆಯೇ ಮಾಡಿದಳು. ಎಲೀಯನಿಗೂ, ಮಹಿಳೆಗೂ, ಆಕೆಯ ಮಗನಿಗೂ ಪ್ರತಿದಿನ ಸಾಕಾಗುವಷ್ಟು ಆಹಾರವಿತ್ತು. 16 ಯೆಹೋವ ದೇವರು ಎಲೀಯನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಮಡಕೆಯಲ್ಲಿರುವ ಹಿಟ್ಟು ತೀರದೆ, ಕುಡಿಕೆಯಲ್ಲಿರುವ ಎಣ್ಣೆಯು ಮುಗಿಯದೆ ಇತ್ತು.
17 ಸ್ವಲ್ಪ ಸಮಯದ ತರುವಾಯ, ಮನೆಯ ಯಜಮಾನಿಯಾದ ಆ ಸ್ತ್ರೀಯ ಮಗನು ಅಸ್ವಸ್ಥನಾದನು. ಕೊನೆಗೆ ರೋಗವು ಹೆಚ್ಚಾಗಿದ್ದುದರಿಂದ ಉಸಿರಾಡುವುದು ನಿಂತುಹೋಯಿತು. 18 ಆಗ ಅವಳು ಎಲೀಯನಿಗೆ, “ದೇವರ ಮನುಷ್ಯನೇ, ನನಗೂ ನಿನಗೂ ಏನು? ನನ್ನ ಅಕ್ರಮವನ್ನು ಜ್ಞಾಪಕಪಡಿಸುವುದಕ್ಕೂ, ನನ್ನ ಮಗನು ಸಾಯುವುದಕ್ಕೂ ನನ್ನ ಬಳಿಗೆ ಬಂದಿಯೋ?” ಎಂದಳು.
19 ಅವನು ಅವಳಿಗೆ, “ನಿನ್ನ ಮಗನನ್ನು ನನಗೆ ಕೊಡು,” ಎಂದು ಹೇಳಿ, ಅವನನ್ನು ಅವಳ ಮಡಿಲಿನಿಂದ ಎತ್ತಿಕೊಂಡು, ತಾನು ವಾಸವಾಗಿದ್ದ ಮಾಳಿಗೆಯ ಕೋಣೆಗೆ ಹೋಗಿ, ಅವನನ್ನು ಮಂಚದ ಮೇಲೆ ಮಲಗಿಸಿದನು. 20 “ನನ್ನ ದೇವರಾದ ಯೆಹೋವ ದೇವರೇ, ವಿಧವೆಯ ಮಗನನ್ನು ಕೊಂದುಹಾಕುವ ಈ ದುರಂತ ಅವಳ ಮೇಲೆ ಬರಮಾಡಿದಿಯಲ್ಲಾ?” ಎಂದು ಯೆಹೋವ ದೇವರನ್ನು ಕೂಗಿ ಬೇಡಿದನು. 21 ಅವನು ಬಾಲಕನ ಮೇಲೆ ಮೂರು ಸಾರಿ ಬೋರಲು ಬಿದ್ದು, “ನನ್ನ ದೇವರಾದ ಯೆಹೋವ ದೇವರೇ, ಈ ಬಾಲಕನ ಪ್ರಾಣ ಅವನಲ್ಲಿ ತಿರುಗಿಬರಲಿ,” ಎಂದು ಯೆಹೋವ ದೇವರನ್ನು ಕೂಗಿದನು.
22 ಯೆಹೋವ ದೇವರು ಎಲೀಯನ ಪ್ರಾರ್ಥನೆಯನ್ನು ಕೇಳಿದ್ದರಿಂದ ಬಾಲಕನು ಬದುಕುವ ಹಾಗೆ ಅವನ ಪ್ರಾಣವು ಅವನೊಳಗೆ ತಿರುಗಿ ಬಂತು. 23 ಆಗ ಎಲೀಯನು ಬಾಲಕನನ್ನು ಎತ್ತಿಕೊಂಡು ಉಪ್ಪರಿಗೆಯಿಂದ ಕೆಳಗಿರುವ ಮನೆಗೆ ತೆಗೆದುಕೊಂಡು ಬಂದು, ಅವನನ್ನು ಅವನ ತಾಯಿಗೆ ಕೊಟ್ಟು, “ನೋಡು, ನಿನ್ನ ಮಗನು ಜೀವದಿಂದಿದ್ದಾನೆ,” ಎಂದು ಹೇಳಿದನು.
24 ಸ್ತ್ರೀಯು ಎಲೀಯನಿಗೆ, “ನೀನು ದೇವರ ಮನುಷ್ಯನೆಂದೂ, ನಿನ್ನ ಬಾಯಲ್ಲಿರುವ ಯೆಹೋವ ದೇವರ ವಾಕ್ಯವು ಸತ್ಯವೆಂದೂ ಇದರಿಂದ ಈಗ ತಿಳಿದಿದ್ದೇನೆ,” ಎಂದಳು.