29
ಆಕೀಷನು ದಾವೀದನನ್ನು ಚಿಕ್ಲಗಿಗೆ ಹಿಂದಿರುಗಿ ಕಳುಹಿಸಿದ್ದು
1 ಫಿಲಿಷ್ಟಿಯರು ತಮ್ಮ ಸಮಸ್ತ ಸೈನ್ಯಗಳನ್ನು ಅಫೇಕದಲ್ಲಿ ಕೂಡಿಸಿಕೊಂಡರು. ಹಾಗೆಯೇ ಇಸ್ರಾಯೇಲರು ಇಜ್ರೆಯೇಲ್ ಎಂಬ ಬುಗ್ಗೆಯ ಬಳಿಯಲ್ಲಿ ದಂಡಿಳಿದರು. 2 ಫಿಲಿಷ್ಟಿಯರ ಅಧಿಪತಿಗಳು ನೂರು ನೂರಾಗಿಯೂ, ಸಾವಿರ ಸಾವಿರವಾಗಿಯೂ ನಡೆದು ಬಂದರು. ದಾವೀದನೂ, ಅವನ ಜನರೂ ಆಕೀಷನ ಸಂಗಡ ಹಿಂದಿನ ದಂಡಿನಲ್ಲಿ ಬಂದರು. 3 ಆಗ ಫಿಲಿಷ್ಟಿಯರ ಅಧಿಪತಿಗಳು, “ಈ ಹಿಬ್ರಿಯರು ಏಕೆ?” ಎಂದರು.
ಆಕೀಷನು ಫಿಲಿಷ್ಟಿಯರ ಅಧಿಪತಿಗಳಿಗೆ, “ಇಸ್ರಾಯೇಲಿನ ಅರಸನಾದ ಸೌಲನ ದಾಸನಾದ ಈ ದಾವೀದನು ಇಷ್ಟು ದಿವಸಗಳೂ, ಇಷ್ಟು ವರ್ಷಗಳೂ ನನ್ನ ಸಂಗಡ ಇದ್ದಾನೆ? ಸೌಲನನ್ನು ಬಿಟ್ಟು ನನ್ನ ಹತ್ತಿರ ಬಂದ ದಿವಸ ಮೊದಲುಗೊಂಡು ಇಂದಿನವರೆಗೂ ನಾನು ಅವನಲ್ಲಿ ಒಂದು ಅಪರಾಧವನ್ನಾದರೂ ಕಂಡುಕೊಳ್ಳಲಿಲ್ಲ,” ಎಂದನು.
4 ಆದರೆ ಫಿಲಿಷ್ಟಿಯರ ಅಧಿಪತಿಗಳು ಆಕೀಷನ ಮೇಲೆ ಕೋಪಗೊಂಡು ಅವನಿಗೆ, “ಇವನು ಯುದ್ಧದಲ್ಲಿ ನಮಗೆ ಶತ್ರುವಾಗಿರದಂತೆ, ಯುದ್ಧಕ್ಕೆ ನಮ್ಮ ಸಂಗಡ ಇವನನ್ನು ಬರಗೊಡದೆ, ನೀನು ಅವನಿಗೆ ನೇಮಿಸಿದ ಸ್ಥಳಕ್ಕೆ ತಿರುಗಿ ಹೋಗುವಹಾಗೆ ಅವನನ್ನು ಕಳುಹಿಸಿಬಿಡು. ಏಕೆಂದರೆ ಇವನು ಯಾವುದರಿಂದ ತನ್ನ ಯಜಮಾನನ ಮೆಚ್ಚಿಗೆ ಪಡೆದುಕೊಳ್ಳುವನು. ಅದು ಈ ಮನುಷ್ಯರ ತಲೆಗಳಿಂದಲ್ಲವೇ? 5 ಸ್ತ್ರೀಯರು ತಮ್ಮ ನೃತ್ಯಗಳಲ್ಲಿ ಹಾಡಿದ ದಾವೀದನು ಇವನಲ್ಲವೇ:
“ ‘ಸೌಲನು ಸಾವಿರ ಜನರನ್ನೂ,
ದಾವೀದನು ಹತ್ತು ಸಾವಿರ ಜನರನ್ನೂ ಹೊಡೆದನು.’ ”
6 ಆಗ ಆಕೀಷನು ದಾವೀದನನ್ನು ಕರೆದು ಅವನಿಗೆ, “ನಿಜವಾಗಿಯೂ ಯೆಹೋವ ದೇವರಾಣೆ, ನೀನು ಯಥಾರ್ಥನು, ನೀನು ನನ್ನ ಸಂಗಡ ದಂಡಿನಲ್ಲಿ ಹೋಗುತ್ತಾ ಬರುತ್ತಾ ಇರುವುದು ನನ್ನ ದೃಷ್ಟಿಗೆ ಒಳ್ಳೆಯದು. ನೀನು ನನ್ನ ಬಳಿಗೆ ಬಂದ ದಿನದಿಂದ ಈವರೆಗೂ ನಿನ್ನಲ್ಲಿ ಕೆಟ್ಟದ್ದನ್ನು ಕಂಡಿಲ್ಲ. ಆದರೆ ಈಗ ನೀನು ಅಧಿಪತಿಗಳ ದೃಷ್ಟಿಗೆ ಒಳ್ಳೆಯವನಲ್ಲ. 7 ಆದ್ದರಿಂದ ನೀನು ಫಿಲಿಷ್ಟಿಯರ ಅಧಿಪತಿಗಳ ದೃಷ್ಟಿಗೆ ಮೆಚ್ಚಿಗೆ ಇಲ್ಲದ್ದರಿಂದ ಈಗ ಸಮಾಧಾನವಾಗಿ ಹಿಂದಕ್ಕೆ ನಿನ್ನ ಸ್ಥಳಕ್ಕೆ ಹೋಗು,” ಎಂದನು.
8 ದಾವೀದನು ಆಕೀಷನಿಗೆ, “ನನ್ನ ಯಜಮಾನನಾದ ಅರಸನ ಶತ್ರುಗಳ ಸಂಗಡ ಯುದ್ಧಮಾಡಲು ಹೋಗದ ಹಾಗೆ ನಾನೇನು ಮಾಡಿದೆನು? ನಿನ್ನ ದಾಸನು ನಿನ್ನ ಬಳಿಗೆ ಬಂದಂದಿನಿಂದ ಈ ದಿನದವರೆಗೂ ನನ್ನಲ್ಲಿ ಏನು ಕಂಡುಕೊಂಡಿ?” ಎಂದನು.
9 ಆಕೀಷನು ದಾವೀದನಿಗೆ ಉತ್ತರವಾಗಿ, “ನೀನು ನನ್ನ ದೃಷ್ಟಿಯಲ್ಲಿ ಒಬ್ಬ ದೇವದೂತನ ಹಾಗೆಯೇ ಉತ್ತಮನಾಗಿದ್ದೀ ಎಂದು ನಾನು ಬಲ್ಲೆನು. ಆದರೆ, ‘ಯುದ್ಧಕ್ಕೆ ಇವನು ನಮ್ಮ ಸಂಗಡ ಬರಬಾರದು,’ ಎಂದು ಫಿಲಿಷ್ಟಿಯರ ಅಧಿಪತಿಗಳು ಹೇಳಿದ್ದಾರೆ. 10 ಆದ್ದರಿಂದ ನಾಳೆ ಉದಯಕ್ಕೆ ಎದ್ದು ನಿನ್ನ ಸಂಗಡ ಬಂದ ನಿನ್ನ ಯಜಮಾನನ ಸೇವಕರನ್ನು ಕರಕೊಂಡು, ಅವರ ಸಂಗಡ ಉದಯದಲ್ಲಿ ಬೆಳಕು ಆಗುವಾಗ ಹೊರಟು ಹೋಗು,” ಎಂದನು.
11 ಹಾಗೆಯೇ ದಾವೀದನೂ, ಅವನು ಜನರೂ ಉದಯದಲ್ಲಿ ಫಿಲಿಷ್ಟಿಯರ ದೇಶಕ್ಕೆ ತಿರುಗಿ ಹೋಗಲು ಮುಂಜಾನೆ ಎದ್ದರು. ಫಿಲಿಷ್ಟಿಯರು ಇಜ್ರೆಯೇಲ್ ಎಂಬ ಪಟ್ಟಣಕ್ಕೆ ಹೊರಟು ಹೋದರು.