34
ಯೋಷೀಯನ ಪುನಃಸ್ಥಾಪನೆ
ಯೋಷೀಯನು ಅರಸನಾದಾಗ ಎಂಟು ವರ್ಷದವನಾಗಿದ್ದನು, ಅವನು ಮೂವತ್ತೊಂದು ವರ್ಷ ಯೆರೂಸಲೇಮಿನಲ್ಲಿ ಆಳಿದನು. ಅವನು ಯೆಹೋವ ದೇವರ ದೃಷ್ಟಿಗೆ ಒಳ್ಳೆಯದನ್ನು ಮಾಡಿ, ಎಡಕ್ಕಾಗಲಿ ಬಲಕ್ಕಾಗಲಿ ತಿರುಗದೆ ತನ್ನ ಪೂರ್ವಜನಾದ ದಾವೀದನ ಮಾರ್ಗಗಳಲ್ಲಿಯೇ ನಡೆದನು.
ಅವನು ಇನ್ನೂ ಬಾಲಕನಾಗಿರುವಾಗ, ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ತನ್ನ ಪೂರ್ವಜನಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಉನ್ನತ ಪೂಜಾಸ್ಥಳಗಳನ್ನೂ, ಅಶೇರ ಸ್ತಂಭಗಳನ್ನೂ, ಕೆತ್ತಿದ ವಿಗ್ರಹಗಳನ್ನೂ ತೆಗೆದುಹಾಕಿ, ಯೆಹೂದ ಮತ್ತು ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು. ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯ ಸ್ತಂಭಗಳನ್ನು ಕಡಿದುಹಾಕಿ; ಅಶೇರ ಸ್ತಂಭಗಳನ್ನೂ, ಕೆತ್ತಿದ ವಿಗ್ರಹಗಳನ್ನೂ, ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿಗಳ ಮೇಲೆ ಚಿಲ್ಲಿಸಿ, ಪೂಜಾರಿಗಳ ಎಲುಬುಗಳನ್ನು ಅವರ ಬಲಿಪೀಠಗಳ ಮೇಲೆ ಸುಟ್ಟುಬಿಟ್ಟು; ಯೆಹೂದ ಪ್ರಾಂತ್ಯವನ್ನೂ, ಯೆರೂಸಲೇಮ ಪಟ್ಟಣವನ್ನೂ ಶುಚಿಮಾಡಿದರು. ಹೀಗೆಯೇ ಅವರು ತಮ್ಮ ಗುದ್ದಲಿಗಳಿಂದ ಮನಸ್ಸೆ, ಎಫ್ರಾಯೀಮ್, ಸಿಮೆಯೋನ್, ನಫ್ತಾಲಿ ಪ್ರಾಂತ್ಯಗಳ ಪಟ್ಟಣಗಳ ಸುತ್ತಲೂ ಶುಚಿಮಾಡಿದರು. ಅವನು ಬಲಿಪೀಠಗಳನ್ನೂ, ಅಶೇರ ಸ್ತಂಭಗಳನ್ನೂ ಕೆಡವಿಹಾಕಿ, ಕೆತ್ತಿದ ವಿಗ್ರಹಗಳನ್ನು ಕುಟ್ಟಿ ಪುಡಿಪುಡಿಮಾಡಿ, ಇಸ್ರಾಯೇಲ್ ದೇಶದಲ್ಲೆಲ್ಲಿಯೂ ಇರುವ ಸಮಸ್ತ ವಿಗ್ರಹಗಳನ್ನು ಕೆಡವಿದ ತರುವಾಯ ಯೆರೂಸಲೇಮಿಗೆ ಹಿಂದಿರುಗಿದನು.
ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ, ಅವನು ದೇಶವನ್ನೂ, ಆಲಯವನ್ನೂ ಶುಚಿ ಮಾಡಿದ ತರುವಾಯ ತನ್ನ ದೇವರಾದ ಯೆಹೋವ ದೇವರ ಆಲಯವನ್ನು ದುರಸ್ತಿ ಮಾಡುವುದಕ್ಕೆ ಅಚಲ್ಯನ ಮಗನಾದ ಶಾಫಾನನನ್ನೂ, ಪಟ್ಟಣದ ಅಧಿಪತಿಯಾದ ಮಾಸೇಯನನ್ನೂ, ರಾಜಲೇಖಕನಾಗಿದ್ದ ಯೋವಾಹಾಜನ ಮಗನಾದ ಯೋವಾಹನನ್ನೂ ಕಳುಹಿಸಿದನು.
ಇವರು ದ್ವಾರಪಾಲಕರಾದ ಲೇವಿಯರು ಮನಸ್ಸೆ, ಎಫ್ರಾಯೀಮ್ ಜನರಿಂದಲೂ, ಇಸ್ರಾಯೇಲಿನ ಉಳಿದವರಿಂದಲೂ, ಯೆಹೂದ ಬೆನ್ಯಾಮೀನರಿಂದಲೂ ಯೆರೂಸಲೇಮಿನ ಎಲ್ಲಾ ನಿವಾಸಿಗಳಿಂದಲೂ ಕೂಡಿಸಿದ ಹಣವನ್ನು ತೆಗೆದುಕೊಂಡು ದೇವರ ಆಲಯಕ್ಕೆ ತಂದು ಮಹಾಯಾಜಕನಾದ ಹಿಲ್ಕೀಯನಿಗೆ ಕೊಟ್ಟರು. 10 ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಅದನ್ನು ಒಪ್ಪಿಸಿದರು. ಇವರು ಯೆಹೋವ ದೇವರ ಆಲಯವನ್ನು ಭದ್ರಮಾಡಿ, ದುರಸ್ತಿ ಮಾಡುವವರಿಗೆ ಅದನ್ನು ಕೊಟ್ಟರು. 11 ಕೆತ್ತಿದ ಕಲ್ಲುಗಳನ್ನೂ, ತೊಲೆಗಳಿಗೋಸ್ಕರ ಮರಗಳನ್ನೂ, ಯೆಹೂದದ ಅರಸರ ಅಲಕ್ಷ್ಯದಿಂದ ಹಾಳಾಗಿದ್ದ ಕಟ್ಟಡಗಳಿಗೆ ಹಲಿಗೆಗಳನ್ನು ಕೊಂಡುಕೊಳ್ಳಲೂ, ಬಡಗಿಯರಿಗೂ, ಕಲ್ಲುಕೆಲಸದವರಿಗೂ ಆ ಹಣವನ್ನು ಕೊಟ್ಟರು.
12 ಈ ಮನುಷ್ಯರು ಕೆಲಸವನ್ನು ನಂಬಿಕೆಯಿಂದ ಮಾಡಿದರು. ಅವರ ವಿಚಾರಣೆಯ ಮೇಲ್ವಿಚಾರಕರು ಯಾರೆಂದರೆ ಮೆರಾರೀಯ ಪುತ್ರರಲ್ಲಿ ಲೇವಿಯರಾದ ಯಹಾತನೂ, ಓಬದ್ಯನೂ; ಕೊಹಾತ್ಯರ ಮಕ್ಕಳಲ್ಲಿ ಜೆಕರ್ಯನೂ, ಮೆಷುಲ್ಲಾಮನೂ; ಗೀತವಾದ್ಯಗಳಲ್ಲಿ ಬುದ್ಧಿಯುಳ್ಳವರಾದ ಲೇವಿಯರೆಲ್ಲರೂ ಅದನ್ನು ನಡೆಸುತ್ತಾ ಇದ್ದರು. 13 ಇದಲ್ಲದೆ ಕಾರ್ಮಿಕರ ಮೇಲೆಯೂ, ಬೇರೆ ಬೇರೆ ಸೇವೆಯ ಕೆಲಸವನ್ನು ಮಾಡುವವರ ಮೇಲೆಯೂ ಅವರು ಮೇಲ್ವಿಚಾರಕರಾಗಿದ್ದರು. ಲೇವಿಯರಲ್ಲಿ ಕೆಲವರು ಕಾರ್ಯದರ್ಶಿಗಳೂ, ಬರಹಗಾರರೂ, ದ್ವಾರಪಾಲಕರೂ ಆಗಿದ್ದರು.
ದೇವರ ನಿಯಮದ ಗ್ರಂಥವನ್ನು ಕಂಡುಕೊಂಡದ್ದು
14 ಯೆಹೋವ ದೇವರ ಆಲಯಕ್ಕೆ ತಂದ ಹಣವನ್ನು ಅವರು ಹೊರಗೆ ತೆಗೆದುಕೊಂಡು ಬರುವಾಗ, ಯಾಜಕನಾದ ಹಿಲ್ಕೀಯನು ಮೋಶೆಯ ಕೈಯಿಂದಾದ ಯೆಹೋವ ದೇವರ ನಿಯಮದ ಗ್ರಂಥವನ್ನು ಕಂಡುಕೊಂಡನು. 15 ಆಗ ಹಿಲ್ಕೀಯನು ಉತ್ತರಕೊಟ್ಟು ಕಾರ್ಯದರ್ಶಿಯಾದ ಶಾಫಾನನಿಗೆ, “ಯೆಹೋವ ದೇವರ ಆಲಯದಲ್ಲಿ ನಿಯಮ ಗ್ರಂಥವು ನನಗೆ ಸಿಕ್ಕಿತು,” ಎಂದು ಹೇಳಿದನು. ಹಿಲ್ಕೀಯನು ಆ ಗ್ರಂಥವನ್ನು ಶಾಫಾನನಿಗೆ ಒಪ್ಪಿಸಿದನು.
16 ಶಾಫಾನನು ಆ ಗ್ರಂಥವನ್ನು ಅರಸನ ಬಳಿಗೆ ತೆಗೆದುಕೊಂಡುಹೋಗಿ, ಅರಸನಿಗೆ ಈ ಮಾತನ್ನು ತಿರುಗಿ ಹೇಳಿದನು. “ನಿನ್ನ ಸೇವಕರ ಕೈಗೆ ಒಪ್ಪಿಸಿದ್ದನ್ನೆಲ್ಲಾ ಅವರು ಮಾಡುತ್ತಿದ್ದಾರೆ. 17 ಇದಲ್ಲದೆ ಅವರು ಯೆಹೋವ ದೇವರ ಆಲಯದಲ್ಲಿ ದೊರಕಿದ ಹಣವನ್ನು ತೆಗೆದು ಮೇಲ್ವಿಚಾರಕರ ಕೈಯಲ್ಲಿ ಮತ್ತು ಕೆಲಸದವರ ಕೈಯಲ್ಲಿ ಒಪ್ಪಿಸಿದ್ದಾರೆ. 18 ಕಾರ್ಯದರ್ಶಿಯಾದ ಶಾಫಾನನು ಅರಸನಿಗೆ ಯಾಜಕನಾದ ಹಿಲ್ಕೀಯನು ನನಗೆ ಗ್ರಂಥವನ್ನು ಕೊಟ್ಟಿದ್ದಾನೆ,” ಎಂದು ತಿಳಿಸಿದನು. ಆಗ ಶಾಫಾನನು ಅದನ್ನು ಅರಸನ ಮುಂದೆ ಓದಿದನು.
19 ಅರಸನು ದೇವರ ನಿಯಮದ ವಾಕ್ಯಗಳನ್ನು ಕೇಳಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡನು. 20 ಹಿಲ್ಕೀಯನಿಗೂ, ಶಾಫಾನನ ಮಗನಾದ ಅಹೀಕಾಮನಿಗೂ, ಮೀಕನ ಮಗನಾದ ಅಬ್ದೋನನಿಗೂ, ಕಾರ್ಯದರ್ಶಿಯಾದ ಶಾಫಾನನಿಗೂ, ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ, 21 “ನೀವು ಹೋಗಿ ಸಿಕ್ಕಿದ ಈ ಗ್ರಂಥದ ವಾಕ್ಯಗಳ ಕುರಿತು ನನಗೋಸ್ಕರವೂ, ಇಸ್ರಾಯೇಲ್ ಮತ್ತು ಯೆಹೂದದಲ್ಲಿ ಉಳಿದವರಿಗೋಸ್ಕರವೂ ಯೆಹೋವ ದೇವರ ಬಳಿಯಲ್ಲಿ ವಿಚಾರಿಸಿರಿ. ಏಕೆಂದರೆ ನಮ್ಮನ್ನು ಕುರಿತು ಬರೆದಿರುವ ಎಲ್ಲವನ್ನೂ ಕೈಗೊಂಡು ನಡೆಯಲು ನಮ್ಮ ಪಿತೃಗಳು ಈ ಗ್ರಂಥದ ಮಾತುಗಳನ್ನು ಕೇಳದೆ ಹೋದುದರಿಂದ, ನಮ್ಮ ಮೇಲೆ ಸುರಿದ ಯೆಹೋವ ದೇವರ ಕೋಪವು ದೊಡ್ಡದಾಗಿದೆ,” ಎಂದು ಹೇಳಿದನು.
22 ಆಗ ಹಿಲ್ಕೀಯನೂ ಅರಸನ ಜನರೂ ಹಸ್ರನ ಮಗನೂ ತೊಕ್ಹತನ ಮಗನೂ ಪ್ರವಾದಿನಿ ಹುಲ್ದಳ ಬಳಿಗೆ ಹೋಗಿ ವಿಚಾರಿಸಿದರು. ಆಕೆಯು ರಾಜವಸ್ತ್ರಗಳ ಮೇಲ್ವಿಚಾರಕನೂ ಆದ ಶಲ್ಲೂಮನ ಹೆಂಡತಿ, ಅವಳು ಯೆರೂಸಲೇಮಿನೊಳಗೆ ಹೊಸದಾದ ನಿರ್ಮಿತ ಭಾಗದಲ್ಲಿ ವಾಸವಾಗಿದ್ದಳು.
23 ಹುಲ್ದಳು ಅವರಿಗೆ, “ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಇಸ್ರಾಯೇಲ್ ದೇವರಾದ ಯೆಹೋವ ದೇವರ ಮಾತುಗಳನ್ನು ತಿಳಿಸಿರಿ: 24 ‘ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನೂ, ಯೆಹೂದದ ಅರಸನ ಮುಂದೆ ಅವರು ಓದಿದ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಾಪಗಳನ್ನೂ ಬರಮಾಡುವೆನು. 25 ಏಕೆಂದರೆ ಅವರು ನನ್ನನ್ನು ಬಿಟ್ಟುಬಿಟ್ಟು, ತಮ್ಮ ಸಮಸ್ತ ಕ್ರಿಯೆಗಳಿಂದ ನನಗೆ ಕೋಪವನ್ನು ಎಬ್ಬಿಸುವಂತೆ ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ಆದ್ದರಿಂದ ನನ್ನ ಕೋಪವು ಈ ಸ್ಥಳದ ಮೇಲೆ ಸುರಿಯುವುದು, ಅದು ಆರಿಹೋಗುವುದಿಲ್ಲ.’ 26 ಆದರೆ ಯೆಹೋವ ದೇವರನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ, ‘ನೀವು ಕೇಳಿದ ಮಾತುಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, 27 ಈ ಸ್ಥಳಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳ ವಿರೋಧವಾಗಿಯೂ ದೇವರು ಹೇಳಿದ ಮಾತುಗಳನ್ನು ನೀನು ಕೇಳಿದಾಗ, ನಿನ್ನ ಹೃದಯವು ಮೃದುವಾಗಿ, ನಿನ್ನನ್ನು ನನ್ನ ಮುಂದೆ ತಗ್ಗಿಸಿಕೊಂಡೆ. ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಸಮ್ಮುಖದಲ್ಲಿ ಕಣ್ಣೀರು ಸುರಿಸಿದ್ದರಿಂದ, ನಾನು ನಿನ್ನ ಮೊರೆಯನ್ನು ಕೇಳಿದೆನು, 28 ಆದ್ದರಿಂದ ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು. ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವೆ. ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವುದಿಲ್ಲ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದಳು.
ಅವರು ಹೋಗಿ ಈ ಉತ್ತರವನ್ನು ಅರಸನಿಗೆ ತಿಳಿಸಿದರು.
29 ಅನಂತರ ಅರಸನಾದ ಯೋಷೀಯನು ಯೆಹೂದದ, ಯೆರೂಸಲೇಮಿನ ಹಿರಿಯರೆಲ್ಲರನ್ನು ಕರೆಕಳುಹಿಸಿ ತನ್ನ ಬಳಿಯಲ್ಲಿ ಒಟ್ಟಾಗಿ ಕೂಡಿಸಿದನು. 30 ಆಗ ಅರಸನೂ ಅವನ ಸಂಗಡ ಯೆಹೂದದ ಜನರೂ, ಯೆರೂಸಲೇಮಿನ ನಿವಾಸಿಗಳೂ ಯಾಜಕರೂ ಲೇವಿಯರೂ ಹಿರಿಕಿರಿಯರಾದ ಸಮಸ್ತ ಜನರೂ ಯೆಹೋವ ದೇವರ ಆಲಯಕ್ಕೆ ಹೋದರು. ಅರಸನು ಯೆಹೋವ ದೇವರ ಆಲಯದಲ್ಲಿ ದೊರಕಿದ ಒಡಂಬಡಿಕೆಯ ಗ್ರಂಥದ ಮಾತುಗಳನ್ನೆಲ್ಲಾ ಅವರು ಕೇಳುವಂತೆ ಓದಿದನು. 31 ಅರಸನು ತನ್ನ ಸ್ತಂಭದಲ್ಲಿ ನಿಂತುಕೊಂಡು ಯೆಹೋವ ದೇವರನ್ನು ಹಿಂಬಾಲಿಸುವುದಕ್ಕೂ, ದೇವರ ಆಜ್ಞೆಗಳನ್ನೂ, ದೇವರ ಸಾಕ್ಷಿಗಳನ್ನೂ, ಕಟ್ಟಳೆಗಳನ್ನೂ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಕೈಗೊಳ್ಳುವುದಕ್ಕೂ, ಈ ಗ್ರಂಥದಲ್ಲಿ ಬರೆದಿರುವ ಒಡಂಬಡಿಕೆಯ ವಾಕ್ಯಗಳನ್ನು ನೆರವೇರಿಸುವುದಕ್ಕೂ ಯೆಹೋವ ದೇವರ ಮುಂದೆ ಒಡಂಬಡಿಕೆಯನ್ನು ಮಾಡಿದನು.
32 ಇದಲ್ಲದೆ ಅವನು ಯೆರೂಸಲೇಮಿನಲ್ಲಿಯೂ, ಬೆನ್ಯಾಮೀನಿನಲ್ಲಿಯೂ ಪ್ರತಿಯೊಬ್ಬರನ್ನು ಅದಕ್ಕೆ ಒಪ್ಪುವಂತೆ ಮಾಡಿದನು. ಹಾಗೆಯೇ ಯೆರೂಸಲೇಮಿನ ನಿವಾಸಿಗಳು ತಮ್ಮ ಪಿತೃಗಳ ದೇವರ ಒಡಂಬಡಿಕೆಯ ಪ್ರಕಾರ ಮಾಡಿದರು.
33 ಹೀಗೆ ಯೋಷೀಯನು ಇಸ್ರಾಯೇಲರಿಗೆ ಇದ್ದ ಎಲ್ಲಾ ದೇಶಗಳೊಳಗಿಂದ ಸಮಸ್ತ ಅಸಹ್ಯಗಳನ್ನು ತೆಗೆದುಹಾಕಿ, ಇಸ್ರಾಯೇಲಿನಲ್ಲಿ ಸಿಕ್ಕಿದವರೆಲ್ಲರೂ ತಮ್ಮ ದೇವರಾದ ಯೆಹೋವ ದೇವರನ್ನು ಸೇವಿಸುವ ಹಾಗೆ ಮಾಡಿದನು. ಅವನ ದಿವಸಗಳೆಲ್ಲಾ ಅವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಹಿಂಬಾಲಿಸುವುದನ್ನು ಬಿಡದೆ ಇದ್ದರು.