13
ಇಸ್ರಾಯೇಲರ ಅರಸನಾದ ಯೆಹೋವಾಹಾಜನು
1 ಯೆಹೂದದ ಅರಸನಾದ ಅಹಜ್ಯನ ಮಗ ಯೋವಾಷನ ಆಳ್ವಿಕೆಯ ಇಪ್ಪತ್ತಮೂರನೆಯ ವರ್ಷದಲ್ಲಿ, ಯೇಹುವಿನ ಮಗ ಯೆಹೋವಾಹಾಜನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾದನು. ಅವನು ಹದಿನೇಳು ವರ್ಷ ಆಳಿದನು. 2 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ಬಿಟ್ಟುಬಿಡದೆ, ಅವುಗಳನ್ನು ಹಿಂಬಾಲಿಸಿದನು. 3 ಆದ್ದರಿಂದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ಕೋಪಿಸಿಕೊಂಡು, ಅವರನ್ನು ಅರಾಮ್ಯರ ಅರಸನಾದ ಹಜಾಯೇಲನ ಕೈಯಲ್ಲಿಯೂ, ಹಜಾಯೇಲನ ಮಗ ಬೆನ್ಹದದನ ಕೈಯಲ್ಲಿಯೂ ಬಹುಕಾಲ ಒಪ್ಪಿಸಿದರು.
4 ಆಗ ಯೆಹೋವಾಹಾಜನು ಯೆಹೋವ ದೇವರನ್ನು ಬೇಡಿಕೊಂಡದ್ದರಿಂದ ಯೆಹೋವ ದೇವರು ಅವನ ಮೊರೆಯನ್ನು ಕೇಳಿದರು. ಅರಾಮ್ಯರ ಅರಸನು ಇಸ್ರಾಯೇಲರನ್ನು ಬಾಧೆಪಡಿಸಿದ್ದನ್ನು ಅವರು ಕಂಡು, 5 ಯೆಹೋವ ದೇವರು ಇಸ್ರಾಯೇಲರಿಗೆ ಒಬ್ಬ ವಿಮೋಚಕನನ್ನು ಕೊಟ್ಟಿದ್ದರಿಂದ, ಅವರು ಅರಾಮ್ಯರ ಕೈಯಿಂದ ತಪ್ಪಿಸಿಕೊಂಡು ಹೋದರು. ಆಗ ಇಸ್ರಾಯೇಲರು ಮುಂಚಿನ ಹಾಗೆ ತಮ್ಮ ಮನೆಗಳಲ್ಲಿ ವಾಸವಾಗಿದ್ದರು. 6 ಆದರೆ ಅವರು ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಮನೆಯ ಪಾಪಗಳನ್ನು ಬಿಟ್ಟುಬಿಡದೆ ಅವುಗಳಲ್ಲಿ ಮುಂದುವರಿದರು. ಇದಲ್ಲದೆ ಸಮಾರ್ಯದಲ್ಲಿ ಅಶೇರ ಸ್ತಂಭ ಇನ್ನೂ ಉಳಿದಿತ್ತು.
7 ಯೆಹೋವಾಹಾಜನ ಸೈನ್ಯದಲ್ಲಿ ಐವತ್ತು ಕುದುರೆ ರಾಹುತರು, ಹತ್ತು ರಥಗಳು, ಹತ್ತು ಸಾವಿರ ಜನ ಕಾಲಾಳುಗಳ ಹೊರತು ಏನೂ ಉಳಿಯಲಿಲ್ಲ. ಏಕೆಂದರೆ ಅರಾಮಿನ ಅರಸನು ಉಳಿದವರನ್ನು ಸಂಹರಿಸಿ, ತುಳಿದು, ಧೂಳಿನ ಹಾಗೆ ಮಾಡಿದನು.
8 ಯೆಹೋವಾಹಾಜನ ಇತರ ಕಾರ್ಯಗಳೂ ಅವನು ಮಾಡಿದ್ದೆಲ್ಲವೂ ಅವನ ಪರಾಕ್ರಮವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 9 ಯೆಹೋವಾಹಾಜನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನ ಶವವನ್ನು ಸಮಾರ್ಯದಲ್ಲಿ ಹೂಳಿಟ್ಟರು. ಅವನ ಮಗ ಯೋವಾಷನು ಅವನಿಗೆ ಬದಲಾಗಿ ಅರಸನಾದನು.
ಇಸ್ರಾಯೇಲರ ಅರಸನಾದ ಯೆಹೋವಾಷನು
10 ಯೆಹೂದದ ಅರಸನಾದ ಯೋವಾಷನ ಆಳ್ವಿಕೆಯ ಮೂವತ್ತೇಳನೆಯ ವರ್ಷದಲ್ಲಿ ಯೆಹೋವಾಹಾಜನ ಮಗ ಯೋವಾಷನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾದನು. ಅವನು ಹದಿನಾರು ವರ್ಷ ಆಳಿದನು. 11 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ, ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಸಮಸ್ತ ಪಾಪಗಳನ್ನು ತೊರೆದುಬಿಡದೆ, ಅವುಗಳಲ್ಲಿ ಮುಂದುವರೆದನು.
12 ಯೋವಾಷನ ಇತರ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ, ಅವನು ಯೆಹೂದದ ಅರಸನಾದ ಅಮಚ್ಯನ ವಿರುದ್ಧ ಯುದ್ಧ ಮಾಡಿದ ಅವನ ಪರಾಕ್ರಮವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 13 ಯೋವಾಷನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು, ಇವನ ಶವವನ್ನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸರ ಸ್ಮಶಾನದಲ್ಲಿ ಸಮಾಧಿಮಾಡಿದರು. ಯಾರೊಬ್ಬಾಮನು ಅವನ ಸಿಂಹಾಸನ ಮೇಲೆ ಕುಳಿತುಕೊಂಡನು.
14 ಆಗ ಎಲೀಷನು ಮರಣಕರ ವ್ಯಾಧಿಯಿಂದ ಬಳಲುತ್ತಿದ್ದಾಗ, ಇಸ್ರಾಯೇಲಿನ ಅರಸನಾದ ಯೋವಾಷನು ಅವನ ಬಳಿಗೆ ಬಂದು, ಅವನ ಮೇಲೆ ಬಿದ್ದು, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥಗಳೂ ಕುದುರೆ ಸವಾರರು ಆಗಿದ್ದವನೇ!” ಎಂದು ಹೇಳುತ್ತಾ ಅತ್ತನು.
15 ಎಲೀಷನು ಅವನಿಗೆ, “ಒಂದು ಬಿಲ್ಲನ್ನೂ ಬಾಣಗಳನ್ನೂ ತೆಗೆದುಕೋ,” ಎಂದನು. ಅವನು ತೆಗೆದುಕೊಂಡನು. 16 ಅವನು ಇಸ್ರಾಯೇಲಿನ ಅರಸನಿಗೆ, “ನಿನ್ನ ಕೈಯಲ್ಲಿ ಬಿಲ್ಲನ್ನು ತೆಗೆದುಕೋ,” ಅವನು ಅದನ್ನು ತೆಗೆದುಕೊಂಡಾಗ ಎಲೀಷನು ತನ್ನ ಕೈಗಳನ್ನು ಅರಸನ ಕೈಗಳ ಮೇಲೆ ಇಟ್ಟನು.
17 “ಪೂರ್ವದಲ್ಲಿರುವ ಕಿಟಕಿಯನ್ನು ತೆರೆ,” ಎಂದನು. ಅವನು ತೆರೆದನು. ಎಲೀಷನು, “ಎಸೆ,” ಅನ್ನಲು, ಅವನು ಎಸೆದನು. “ಯೆಹೋವ ದೇವರ ವಿಜಯದ ಬಾಣವೇ, ಅರಾಮಿನಿಂದ ತಪ್ಪಿಸುವ ವಿಜಯದ ಬಾಣವೇ, ಅಫೇಕಿನಲ್ಲಿ ಅರಾಮ್ಯರನ್ನು ನಾಶಮಾಡುವವರೆಗೂ ನೀನು ಅವರನ್ನು ಹೊಡೆಯುವೆ,” ಎಂದು ಎಲೀಷನು ಹೇಳಿದನು.
18 ಅವನು, “ಬಾಣಗಳನ್ನು ತೆಗೆದುಕೋ,” ಎಂದನು. ಅರಸನು ತೆಗೆದುಕೊಂಡನು. ಎಲೀಷನು ಇಸ್ರಾಯೇಲಿನ ಅರಸನಿಗೆ, “ನೆಲದ ಮೇಲೆ ಹೊಡೆ,” ಎಂದನು. ಆಗ ಅವನು ಮೂರು ಸಾರಿ ಮಾತ್ರ ಹೊಡೆದು ನಿಂತನು. 19 ಆದರೆ ದೇವರ ಮನುಷ್ಯನು ಅವನ ಮೇಲೆ ಕೋಪಗೊಂಡು, “ನೀನು ಐದಾರು ಸಾರಿ ಹೊಡೆಯಬೇಕಾಗಿತ್ತು. ಆಗ ಅರಾಮ್ಯರನ್ನು ನಾಶಮಾಡುವವರೆಗೂ ಹೊಡೆಯುತ್ತಿದ್ದೆ. ಆದರೆ ಈಗ ಅರಾಮ್ಯರನ್ನು ಮೂರು ಸಾರಿ ಮಾತ್ರ ಹೊಡೆಯುವೆ,” ಎಂದನು.
20 ಅನಂತರ ಎಲೀಷನು ಮೃತನಾದನು. ಅವನ ಶವವನ್ನು ಸಮಾಧಿಮಾಡಿದರು.
ವರ್ಷದ ಆರಂಭದಲ್ಲಿ ಮೋವಾಬ್ಯರ ದಂಡುಗಳು ದೇಶದಲ್ಲಿ ಪ್ರವೇಶಿಸಿದವು. 21 ಒಂದು ದಿನ ಕೆಲವು ಇಸ್ರಾಯೇಲರು ಒಬ್ಬ ಮನುಷ್ಯನನ್ನು ಸಮಾಧಿಮಾಡಲು ಹೋಗುತ್ತಿದ್ದರು. ಆಗ, ಮೋವಾಬ್ಯರ ದಂಡು ಬರುತ್ತಿರುವುದನ್ನು ಕಂಡು, ಆ ಶವವನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿ ಓಡಿಹೋದರು. ಆ ಶವ ಸಮಾಧಿಯ ಮೇಲೆಬಿದ್ದಾಗ, ಅದು ಎಲೀಷನ ಎಲುಬುಗಳಿಗೆ ತಗಲಿ ಜೀವ ಬಂದು ಎದ್ದು ನಿಂತನು.
22 ಯೆಹೋವಾಹಾಜನ ದಿವಸಗಳೆಲ್ಲಾ ಅರಾಮಿನ ಅರಸನಾದ ಹಜಾಯೇಲನು ಇಸ್ರಾಯೇಲರನ್ನು ಬಾಧೆಪಡಿಸಿದನು. 23 ಆದರೆ ಯೆಹೋವ ದೇವರು ಅಬ್ರಹಾಮನ, ಇಸಾಕನ, ಯಾಕೋಬನ ಸಂಗಡ ಒಡಂಬಡಿಕೆಯನ್ನು ಮಾಡಿದ್ದರಿಂದ ಇಸ್ರಾಯೇಲರಿಗೆ ಕೃಪೆತೋರಿಸಿ ಅವರ ಮೇಲೆ ಅನುಕಂಪಗೊಂಡರು. ಅವರನ್ನು ನಾಶಮಾಡಲು, ಆತನು ಅವರನ್ನು ತನ್ನಿಂದ ತೊರೆದುಬಿಡಲು ಅವರನ್ನು ತನ್ನ ಸಮ್ಮುಖದಿಂದ ಹೊರಡಿಸಲು ಮನಸ್ಸು ಮಾಡಲಿಲ್ಲ.
24 ಅರಾಮಿನ ಅರಸನಾದ ಹಜಾಯೇಲನು ಮರಣಹೊಂದಿದನು. ಅವನ ಮಗ ಬೆನ್ಹದದನು ಅವನಿಗೆ ಬದಲಾಗಿ ಅರಸನಾದನು. 25 ಆಗ ಯೆಹೋವಾಹಾಜನ ಮಗ ಯೋವಾಷನು ಯುದ್ಧದಲ್ಲಿ ತನ್ನ ತಂದೆ ಯೆಹೋವಾಹಾಜನ ಕೈಯಿಂದ ಹಜಾಯೇಲನು ತೆಗೆದುಕೊಂಡಿದ್ದ ಪಟ್ಟಣಗಳನ್ನು ಅವನ ಮಗ ಬೆನ್ಹದದನ ಕೈಯಿಂದ ತಿರುಗಿ ತೆಗೆದುಕೊಂಡನು. ಯೋವಾಷನು ಅವನನ್ನು ಮೂರು ಸಾರಿ ಸೋಲಿಸಿ, ಇಸ್ರಾಯೇಲಿನ ಪಟ್ಟಣಗಳನ್ನು ತಿರುಗಿ ತೆಗೆದುಕೊಂಡನು.