5
ದಶಾಜ್ಞೆಗಳು
ಮೋಶೆಯು ಇಸ್ರಾಯೇಲರನ್ನೆಲ್ಲಾ ಕರೆದು ಅವರಿಗೆ ಹೀಗೆ ಹೇಳಿದನು:
ಇಸ್ರಾಯೇಲರೇ, ನಾನು ಈ ಹೊತ್ತು ನೀವು ಕೇಳುವಂತೆ ಹೇಳುವ ನಿಯಮಗಳನ್ನೂ, ನ್ಯಾಯಗಳನ್ನೂ ಕೇಳಿರಿ. ಇವುಗಳನ್ನು ಕಲಿತು ಕೈಗೊಂಡು ನಡೆಯಬೇಕು. ನಮ್ಮ ದೇವರಾದ ಯೆಹೋವ ದೇವರು ಹೋರೇಬಿನಲ್ಲಿ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಂಡರು. ಯೆಹೋವ ದೇವರು ಆ ಒಡಂಬಡಿಕೆಯನ್ನು ನಮ್ಮ ಪಿತೃಗಳ ಸಂಗಡ ಅಲ್ಲ, ನಮ್ಮ ಸಂಗಡವೇ ಮಾಡಿದರು. ನಾವೆಲ್ಲರೂ ಈ ಹೊತ್ತು ಇಲ್ಲಿ ಜೀವದಿಂದಿದ್ದೇವೆ. ಮುಖಾಮುಖಿಯಾಗಿ ಯೆಹೋವ ದೇವರು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಮಾತನಾಡಿದರು. ಆ ಕಾಲದಲ್ಲಿ ನಾನು ಯೆಹೋವ ದೇವರ ವಾಕ್ಯವನ್ನು ನಿಮಗೆ ತಿಳಿಸಿದ ಹಾಗೆ ಯೆಹೋವ ದೇವರಿಗೂ, ನಿಮಗೂ ನಡುವೆ ನಿಂತಿದ್ದೆನು. ಏಕೆಂದರೆ ನೀವು ಆ ಬೆಂಕಿಗೆ ಭಯಪಟ್ಟು, ಬೆಟ್ಟದ ಮೇಲೆ ಏರಲಿಲ್ಲ.
ದೇವರು ಹೇಳಿದ್ದೇನೆಂದರೆ:
 
“ನಿನ್ನನ್ನು ಈಜಿಪ್ಟ್ ದೇಶದಿಂದಲೂ, ದಾಸತ್ವದ ನಾಡಿನೊಳಗಿಂದಲೂ ಹೊರಗೆ ತಂದ ನಿನ್ನ ದೇವರಾದ ಯೆಹೋವ ದೇವರು ನಾನೇ.
 
“ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು.
ಮೇಲಿನ ಆಕಾಶದಲ್ಲಾಗಲಿ, ಕೆಳಗಿನ ಭೂಮಿಯಲ್ಲಾಗಲಿ, ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಇರುವ ಯಾವುದರ ವಿಗ್ರಹವನ್ನಾಗಲಿ, ರೂಪವನ್ನಾಗಲಿ ನೀನು ಮಾಡಿಕೊಳ್ಳಬಾರದು. ನೀನು ಅವುಗಳಿಗೆ ಅಡ್ಡ ಬೀಳಬಾರದು ಮತ್ತು ಆರಾಧಿಸಲೂಬಾರದು. ಏಕೆಂದರೆ ನಿನ್ನ ದೇವರಾದ ನಾನು, ನನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತನಾದ ಯೆಹೋವ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆತಾಯಿಗಳ ಅಪರಾಧವನ್ನು ಮಕ್ಕಳ ಮೇಲೆಯೂ ಮೂರನೆಯ ನಾಲ್ಕನೆಯ ತಲೆಗಳವರೆಗೂ ಬರಮಾಡುವೆನು. 10 ಆದರೆ ನನ್ನನ್ನು ಪ್ರೀತಿಸಿ, ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗೆ, ಸಾವಿರ ತಲೆಗಳವರೆಗೆ ಪ್ರೀತಿ ತೋರಿಸುತ್ತೇನೆ.
11 ನಿನ್ನ ದೇವರಾದ ಯೆಹೋವ ದೇವರ ಹೆಸರನ್ನು ದುರುಪಯೋಗಮಾಡಬಾರದು, ಏಕೆಂದರೆ ಯೆಹೋವ ದೇವರು ತಮ್ಮ ಹೆಸರನ್ನು ದುರುಪಯೋಗಮಾಡುವವರನ್ನು ಶಿಕ್ಷಿಸದೆ ಬಿಡುವುದಿಲ್ಲ.
12 ನಿನ್ನ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದಂತೆ ಸಬ್ಬತ್* 5:12 ಸಬ್ಬತ್ ಅಂದರೆ ವಿಶ್ರಾಂತಿ ದಿನ ದಿನವನ್ನು ಪರಿಶುದ್ಧ ದಿನವೆಂದು ಆಚರಿಸಬೇಕು. 13 ಆರು ದಿನಗಳಲ್ಲಿ ನೀನು ದುಡಿದು, ನಿನ್ನ ಕೆಲಸವನ್ನೆಲ್ಲಾ ಮಾಡಬೇಕು. 14 ಆದರೆ ಏಳನೆಯ ದಿನ ನಿನ್ನ ದೇವರಾದ ಯೆಹೋವ ದೇವರ ಸಬ್ಬತ್ ದಿನವಾಗಿದೆ. ಅದರಲ್ಲಿ ನೀನಾಗಲೀ, ನಿನ್ನ ಮಗನಾಗಲೀ, ನಿನ್ನ ಮಗಳಾಗಲೀ, ನಿನ್ನ ದಾಸನಾಗಲೀ, ನಿನ್ನ ದಾಸಿಯಾಗಲೀ, ನಿನ್ನ ಎತ್ತೂ, ನಿನ್ನ ಕತ್ತೆಯೂ, ನಿನ್ನ ಎಲ್ಲಾ ಪಶುಗಳೂ, ನಿನ್ನ ಊರಲ್ಲಿರುವ ಅನ್ಯದೇಶದವರು ಸಹ ಯಾವ ಕೆಲಸವನ್ನೂ ಮಾಡಬಾರದು. ನಿನ್ನ ದಾಸನೂ ದಾಸಿಯೂ ನಿನ್ನ ಹಾಗೆ ವಿಶ್ರಮಿಸಿಕೊಳ್ಳಬೇಕು. 15 ನೀನು ಈಜಿಪ್ಟ್ ದೇಶದಲ್ಲಿ ದಾಸನಾಗಿದ್ದಿಯೆಂದೂ, ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಅಲ್ಲಿಂದ ಬಲವಾದ ಹಸ್ತದಿಂದಲೂ ಚಾಚಿದ ಭುಜದಿಂದಲೂ ಹೊರಗೆ ಬರಮಾಡಿದರೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದಕಾರಣ ನಿನ್ನ ದೇವರಾದ ಯೆಹೋವ ದೇವರು ನಿನಗೆ ಸಬ್ಬತ್ ದಿನವನ್ನು ಆಚರಿಸಬೇಕೆಂದು ಆಜ್ಞಾಪಿಸಿದ್ದಾರೆ.
16 ನಿನ್ನ ದಿವಸಗಳು ಹೆಚ್ಚಾಗುವ ಹಾಗೆಯೂ, ನಿನ್ನ ದೇವರಾದ ಯೆಹೋವ ದೇವರು ನಿನಗೆ ಕೊಡುವ ದೇಶದಲ್ಲಿ ನಿನಗೆ ಒಳ್ಳೆಯದಾಗುವ ಹಾಗೆಯೂ, ನಿನ್ನ ದೇವರಾದ ಯೆಹೋವ ದೇವರು ಆಜ್ಞಾಪಿಸಿದಂತೆ ನಿನ್ನ ತಂದೆಯನ್ನೂ, ನಿನ್ನ ತಾಯಿಯನ್ನೂ ಗೌರವಿಸು.
17 ಕೊಲೆ ಮಾಡಬೇಡ.
18 ವ್ಯಭಿಚಾರ ಮಾಡಬೇಡ.
19 ಕದಿಯಬೇಡ.
20 ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಬೇಡ.
21 ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ. ನಿನ್ನ ನೆರೆಯವನ ಮನೆಯನ್ನೂ, ಅವನ ಹೊಲವನ್ನೂ, ಅವನ ದಾಸನನ್ನಾಗಲಿ, ಅವನ ದಾಸಿಯನ್ನಾಗಲಿ, ಅವನ ಎತ್ತನ್ನಾಗಲಿ, ಅವನ ಕತ್ತೆಯನ್ನಾಗಲಿ, ನಿನ್ನ ನೆರೆಯವನಿಗೆ ಇರುವ ಯಾವುದನ್ನೂ ಆಶಿಸಬೇಡ.”
 
22 ಈ ಮಾತುಗಳನ್ನು ಯೆಹೋವ ದೇವರು ಬೆಟ್ಟದ ಮೇಲೆ ಬೆಂಕಿ, ಮೋಡ, ಕಾರ್ಗತ್ತಲು, ಇವುಗಳ ಮಧ್ಯದೊಳಗಿಂದ, ನಿಮ್ಮ ಸಭೆಗೆಲ್ಲಾ ಕೇಳಿಸುವಂತೆ ಮಹಾ ಸ್ವರದಿಂದ ನುಡಿದರು. ಅವರು ಹೆಚ್ಚೇನೂ ಕೂಡಿಸಲಿಲ್ಲ. ದೇವರು ಈ ಮಾತುಗಳನ್ನು ಕಲ್ಲಿನ ಎರಡು ಹಲಗೆಗಳಲ್ಲಿ ಬರೆದು ನನಗೆ ಕೊಟ್ಟರು.
23 ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿರಲಾಗಿ, ನೀವು ಕತ್ತಲೆಯಿಂದ ಆ ಸ್ವರವನ್ನು ಕೇಳಿದಾಗ, ನಿಮ್ಮ ಗೋತ್ರಗಳ ಮುಖ್ಯಸ್ಥರೂ, ನಿಮ್ಮ ಹಿರಿಯರೂ ನನ್ನ ಬಳಿಗೆ ಬಂದು ನನಗೆ, 24 “ಇಗೋ, ನಮ್ಮ ದೇವರಾದ ಯೆಹೋವ ದೇವರು ತಮ್ಮ ಮಹಿಮೆಯನ್ನೂ, ತಮ್ಮ ಘನವನ್ನೂ ನಮಗೆ ತೋರಿಸಿದ್ದಾರೆ. ಅವರ ಸ್ವರವನ್ನು ಬೆಂಕಿಯೊಳಗಿಂದ ಕೇಳಿದ್ದೇವೆ. ದೇವರು ಮನುಷ್ಯರ ಸಂಗಡ ಮಾತನಾಡಿದ ಮೇಲೂ, ಅವರು ಬದುಕುತ್ತಾರೆಂದು ಈ ಹೊತ್ತು ನೋಡಿದ್ದೇವೆ. 25 ಹಾಗಾದರೆ ಈಗ ನಾವು ಏಕೆ ಸಾಯಬೇಕು? ಈ ದೊಡ್ಡ ಬೆಂಕಿಯು ನಿಶ್ಚಯವಾಗಿ ನಮ್ಮನ್ನು ದಹಿಸಿಬಿಡುವುದು. ನಾವು ಇನ್ನೂ ನಮ್ಮ ದೇವರಾದ ಯೆಹೋವ ದೇವರ ಸ್ವರವನ್ನು ಕೇಳಿದರೆ ಸಾಯುತ್ತೇವೆ. 26 ಸಮಸ್ತ ಜನರಲ್ಲಿ ಯಾರು ನಮ್ಮ ಹಾಗೆ ಬೆಂಕಿಯೊಳಗಿಂದ ಮಾತನಾಡುವ ಜೀವವುಳ್ಳ ದೇವರ ಸ್ವರವನ್ನು ಕೇಳಿ ಬದುಕಿದರು? 27 ನೀನೇ ಸಮೀಪಕ್ಕೆ ಹೋಗಿ ನಮ್ಮ ದೇವರಾದ ಯೆಹೋವ ದೇವರು ಹೇಳುವುದನ್ನೆಲ್ಲಾ ಕೇಳಿ, ನಮ್ಮ ದೇವರಾದ ಯೆಹೋವ ದೇವರು ನಿನಗೆ ಹೇಳಿದ್ದನ್ನೆಲ್ಲಾ ನಮಗೆ ಹೇಳು. ಆಗ ನಾವು ಕೇಳಿ ಅದರಂತೆ ಮಾಡುತ್ತೇವೆ,” ಎಂದು ಹೇಳಿದಿರಿ.
28 ನೀವು ನನ್ನ ಹತ್ತಿರ ಮಾತನಾಡಿದಾಗ, ಯೆಹೋವ ದೇವರು ನಿಮ್ಮ ಮಾತುಗಳನ್ನು ಕೇಳಿ ನನಗೆ, “ಈ ಜನರು ನಿನಗೆ ಹೇಳಿದ ಮಾತುಗಳನ್ನು ಕೇಳಿದ್ದೇನೆ. ಅವರು ಹೇಳಿದ್ದೆಲ್ಲಾ ಒಳ್ಳೆಯದು. 29 ಅವರು ನನಗೆ ಭಯಪಟ್ಟು, ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಗೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೆಯದು. ಆಗ ಅವರಿಗೂ, ಅವರ ಮಕ್ಕಳಿಗೂ ಎಂದೆಂದಿಗೂ ಒಳ್ಳೆಯದಾಗುವುದು.”
30 “ನೀನು ಹೋಗಿ ಅವರಿಗೆ, ‘ನಿಮ್ಮ ಡೇರೆಗಳಿಗೆ ಹಿಂದಿರುಗಿರಿ,’ ಎಂದು ಹೇಳು. 31 ನೀನಾದರೋ ಇಲ್ಲಿ ನನ್ನ ಸಂಗಡ ನಿಂತುಕೋ. ಆಗ ನೀನು ಅವರಿಗೆ ಬೋಧಿಸತಕ್ಕಂಥ ಮತ್ತು ನಾನು ಅವರಿಗೆ ಸೊತ್ತಾಗಿ ಕೊಡುವ ದೇಶದಲ್ಲಿ ಅವರು ಮಾಡತಕ್ಕಂಥ ಎಲ್ಲಾ ಆಜ್ಞಾನಿಯಮ ಮತ್ತು ನ್ಯಾಯಗಳನ್ನು ನಿಮಗೆ ಹೇಳುವೆನು.”
32 ಹೀಗಿರುವುದರಿಂದ ನೀವು ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದಂತೆ ಅವುಗಳನ್ನು ಕೈಗೊಂಡು ನಡೆಯಬೇಕು. ಎಡಕ್ಕಾದರೂ, ಬಲಕ್ಕಾದರೂ ತಿರುಗಬೇಡಿರಿ. 33 ನೀವು ಬದುಕುವ ಹಾಗೆಯೂ, ನಿಮಗೆ ಒಳ್ಳೆಯದಾಗುವ ಹಾಗೆಯೂ, ನೀವು ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಮಾರ್ಗಗಳಲ್ಲೇ ನಡೆದುಕೊಳ್ಳಬೇಕು.

*5:12 5:12 ಸಬ್ಬತ್ ಅಂದರೆ ವಿಶ್ರಾಂತಿ ದಿನ