9
ಜನರ ಅವಿಧೇಯತೆ
ಇಸ್ರಾಯೇಲರೇ, ಕೇಳಿರಿ, ನೀವು ಹೋಗಿ ನಿಮಗಿಂತ ದೊಡ್ಡ, ಬಲಿಷ್ಠ ಜನಾಂಗಗಳನ್ನೂ, ಆಕಾಶದವರೆಗೆ ಭದ್ರಮಾಡಿದ ದೊಡ್ಡ ಪಟ್ಟಣಗಳನ್ನೂ ಸ್ವಾಧೀನಮಾಡಿಕೊಳ್ಳುವುದಕ್ಕೆ ಈ ಹೊತ್ತು ಯೊರ್ದನ್ ನದಿಯನ್ನು ದಾಟಲಿದ್ದೀರಿ. ಆ ನಾಡಿನ ಅನಾಕ್ಯರು ಬಲಿಷ್ಠರು ಮತ್ತು ಎತ್ತರವಾದ ಪುರುಷರು ಆಗಿದ್ದಾರೆ. ಅವರ ವಿಷಯ ನಿಮಗೆ ತಿಳಿದೇ ಇದೆ. “ಅನಾಕ್ಯರ ಮುಂದೆ ಯಾರು ನಿಲ್ಲುವರು?” ಎಂಬ ಮಾತನ್ನು ಅವರ ಬಗ್ಗೆ ಕೇಳಿದ್ದೀರಿ. ಹೀಗಿರುವುದರಿಂದ ನೀವು ಈ ಹೊತ್ತು ತಿಳಿದುಕೊಳ್ಳತಕ್ಕದ್ದೇನೆಂದರೆ, ನಿಮ್ಮ ದೇವರಾದ ಯೆಹೋವ ದೇವರೇ ನಿಮ್ಮ ಮುಂದೆ ಹೋಗುತ್ತಾರೆ. ಅವರು ದಹಿಸುವ ಅಗ್ನಿಯಾಗಿ ಅವರನ್ನು ನಾಶಮಾಡುವರು. ದೇವರು ಅವರನ್ನು ನಿಮ್ಮ ಮುಂದೆ ಸೋಲಿಸುವರು. ಯೆಹೋವ ದೇವರು ನಿಮಗೆ ಹೇಳಿದ ಹಾಗೆ ನೀವು ಅವರನ್ನು ಸ್ವಾಧೀನಪಡಿಸಿಕೊಂಡು ಅವರನ್ನು ಬೇಗ ತೆಗೆದುಹಾಕುವಿರಿ.
ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ತೆಗೆದುಹಾಕಿದಾಗ, “ಯೆಹೋವ ದೇವರು ನಮ್ಮನ್ನು ಈ ದೇಶವನ್ನು ಸ್ವಾಧೀನಪಡಿಸಲು ಕರೆದುಕೊಂಡು ಬಂದಿದ್ದು ನಮ್ಮ ನೀತಿಯ ನಿಮಿತ್ತವೇ,” ಎಂದು ನೀವು ನಿಮ್ಮ ಹೃದಯದಲ್ಲಿ ಹೇಳಿಕೊಳ್ಳಬಾರದು. ಆ ಜನಾಂಗಗಳ ಕೆಟ್ಟತನದ ನಿಮಿತ್ತವೇ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರಡಿಸುತ್ತಾರೆ. ನಿಮ್ಮ ನೀತಿಗೋಸ್ಕರವೂ, ನಿಮ್ಮ ಹೃದಯದ ಯಥಾರ್ಥತೆಗೋಸ್ಕರವೂ ನೀವು ಅವರ ದೇಶವನ್ನು ಸ್ವತಂತ್ರಿಸಿಕೊಳ್ಳುವುದಕ್ಕೆ ಬರುವುದಿಲ್ಲ. ಆ ಜನಾಂಗಗಳ ಕೆಟ್ಟತನಕ್ಕೋಸ್ಕರವೂ, ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮ್, ಇಸಾಕ್, ಯಾಕೋಬರಿಗೆ ಕೊಟ್ಟ ಮಾತನ್ನು ಪೂರೈಸುವ ಹಾಗೆಯೂ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರಡಿಸುತ್ತಾರೆ. ಹೀಗಿರುವುದರಿಂದ ನಿಮ್ಮ ನೀತಿಗೋಸ್ಕರ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಈ ಒಳ್ಳೆಯ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೊಡುವುದಿಲ್ಲವೆಂದು ನೀವು ತಿಳಿದುಕೊಳ್ಳಬೇಕು. ಏಕೆಂದರೆ ನೀವು ಹಟಮಾರಿ ಜನಾಂಗವಾಗಿದ್ದೀರಿ.
ಚಿನ್ನದ ಕರು
ನೀವು ಮರುಭೂಮಿಯಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದ್ದನ್ನು ಜ್ಞಾಪಕಮಾಡಿಕೊಳ್ಳಿರಿ. ಮರೆಯಬೇಡಿರಿ. ನೀವು ಈಜಿಪ್ಟ್ ದೇಶದಿಂದ ಹೊರಟ ದಿವಸ ಮೊದಲ್ಗೊಂಡು ಈ ಸ್ಥಳಕ್ಕೆ ಬರುವವರೆಗೆ ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬೀಳುತ್ತಿದ್ದೀರಿ. ನೀವು ಹೋರೇಬಿನಲ್ಲಿಯೂ ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದಾಗ, ಅವರು ನಿಮ್ಮನ್ನು ನಿಮ್ಮ ಮೇಲೆ ಸಿಟ್ಟುಮಾಡಿಕೊಂಡು ನಾಶಮಾಡಬೇಕೆಂದಿದ್ದರು. ಆ ಕಲ್ಲಿನ ಹಲಗೆಗಳು ಅಂದರೆ, ಯೆಹೋವ ದೇವರು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯ ಹಲಗೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಬೆಟ್ಟದ ಮೇಲೆ ಏರಿದಾಗ, ನಲವತ್ತು ದಿವಸ ಹಗಲುರಾತ್ರಿ ಬೆಟ್ಟದಲ್ಲಿದ್ದೆನು. ರೊಟ್ಟಿ ತಿನ್ನಲಿಲ್ಲ, ನೀರೂ ಕುಡಿಯಲಿಲ್ಲ. 10 ಆಗ ಯೆಹೋವ ದೇವರು ನನಗೆ ತಮ್ಮ ಬೆರಳಿನಿಂದ ಬರೆದ ಆ ಎರಡು ಕಲ್ಲಿನ ಹಲಗೆಗಳನ್ನು ಕೊಟ್ಟರು. ಯೆಹೋವ ದೇವರು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭೆಕೂಡಿದ ದಿನದಲ್ಲಿ ಹೇಳಿದ ಆಜ್ಞೆಗಳೆಲ್ಲಾ ಆ ಹಲಗೆಗಳಲ್ಲಿದ್ದವು.
11 ನಲವತ್ತು ದಿವಸ ಹಗಲು ರಾತ್ರಿಗಳಾದ ಮೇಲೆ ಯೆಹೋವ ದೇವರು ನನಗೆ ಒಡಂಬಡಿಕೆಯ ಹಲಗೆಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೊಟ್ಟರು. 12 ಆಗ ಯೆಹೋವ ದೇವರು, “ಎದ್ದು ಇಲ್ಲಿಂದ ಬೇಗ ಇಳಿದು ಹೋಗು. ಏಕೆಂದರೆ ನೀನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ನಿನ್ನ ಜನರು ಕೆಟ್ಟು ಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡಿದ್ದಾರೆ,” ಎಂದು ನನಗೆ ಹೇಳಿದರು.
13 ಇದಲ್ಲದೆ ಯೆಹೋವ ದೇವರು ನನಗೆ, “ನಾನು ಈ ಜನರನ್ನು ನೋಡಿದ್ದೇನೆ. ಇಗೋ, ಇದು ಆಜ್ಞೆಗೆ ವಿಧೇಯವಾಗದ ಜನಾಂಗವೇ. 14 ನನ್ನನ್ನು ಬಿಡು, ನಾನು ಅವರನ್ನು ನಾಶಮಾಡಿ, ಅವರ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಟ್ಟು, ನಿಮ್ಮನ್ನು ಅವರಿಗಿಂತ ಬಲಿಷ್ಠವಾದ ಜನಾಂಗವಾಗಿ ಮಾಡುವೆನು,” ಎಂದು ಹೇಳಿದರು.
15 ಆಗ ನಾನು ತಿರುಗಿಕೊಂಡು ಬೆಟ್ಟದಿಂದ ಇಳಿದೆನು. ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿತ್ತು. ಒಡಂಬಡಿಕೆಯ ಎರಡು ಹಲಗೆಗಳು ನನ್ನ ಎರಡು ಕೈಗಳಲ್ಲಿ ಇದ್ದವು. 16 ನಾನು ನೋಡಿದಾಗ, ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಎರಕ ಹೊಯ್ದ ಕರುವನ್ನು ನಿಮಗೆ ಮಾಡಿಕೊಂಡು, ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಮಾರ್ಗವನ್ನು ಬೇಗ ಬಿಟ್ಟುಬಿಟ್ಟು ಹೋಗಿದ್ದಿರಿ. 17 ಆಗ ನಾನು ಆ ಎರಡು ಹಲಗೆಗಳನ್ನು ತೆಗೆದುಕೊಂಡು ನನ್ನ ಕೈಯಿಂದ ಬಿಸಾಡಿ, ನಿಮ್ಮ ಮುಂದೆ ಒಡೆದು ಹಾಕಿದೆನು.
18 ಆಮೇಲೆ ನೀವು ಮಾಡಿದ ಎಲ್ಲಾ ಪಾಪಗಳ ನಿಮಿತ್ತವೂ ನೀವು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ಅವರಿಗೆ ಕೋಪವನ್ನೆಬ್ಬಿಸಿದ ನಿಮಿತ್ತವೂ ಮುಂಚಿನಂತೆ ನಲವತ್ತು ದಿವಸ ಹಗಲುರಾತ್ರಿ ಊಟಮಾಡದೆ, ನೀರು ಕುಡಿಯದೆ, ಯೆಹೋವ ದೇವರ ಮುಂದೆ ಬಿದ್ದಿದ್ದೆನು. 19 ಏಕೆಂದರೆ ಯೆಹೋವ ದೇವರು ನಿಮ್ಮನ್ನು ನಾಶಮಾಡುವಂತೆ ನಿಮ್ಮ ಮೇಲೆ ಮಾಡುವ ಕೋಪ ರೌದ್ರಗಳಿಗೆ ಹೆದರಿದೆನು. ಆದರೆ ಆ ಸಾರಿ ಕೂಡ ಯೆಹೋವ ದೇವರು ನನ್ನ ಬೇಡಿಕೆಯನ್ನು ಕೇಳಿದರು. 20 ಆರೋನನನ್ನು ನಾಶಮಾಡುವಂತೆ ಯೆಹೋವ ದೇವರು ಅವನ ಮೇಲೆಯೂ ಬಹಳ ಕೋಪಗೊಂಡರು. ಆದ್ದರಿಂದ ಆರೋನನಿಗೋಸ್ಕರವೂ ಆ ಸಮಯದಲ್ಲಿ ಪ್ರಾರ್ಥನೆ ಮಾಡಿದೆನು. 21 ಇದಲ್ಲದೆ ನೀವು ಯಾವದರ ಮೂಲಕ ಪಾಪವನ್ನು ಮಾಡಿದ್ದೀರೋ ಆ ಚಿನ್ನದ ಕರುವನ್ನು ನಾನು ತೆಗೆದುಕೊಂಡು, ಬೆಂಕಿಯಿಂದ ಸುಟ್ಟು, ಒಡೆದು, ಅರೆದು, ಧೂಳುಮಾಡಿ, ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ಬಿಸಾಡಿದೆನು.
22 ನೀವು ತಬೇರಾ, ಮಸ್ಸಾ, ಕಿಬ್ರೋತ್ ಹತಾವಾ ಎಂಬ ಸ್ಥಳಗಲ್ಲಿಯೂ ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಿದಿರಿ.
23 ಇದಲ್ಲದೆ ಯೆಹೋವ ದೇವರು ನಿಮ್ಮನ್ನು ಕಾದೇಶ್ ಬರ್ನೇಯದಿಂದ ಕಳುಹಿಸಿ, “ನೀವು ಹೋಗಿ ನಾನು ನಿಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ,” ಎಂದು ಹೇಳಿದಾಗ, ನೀವು ನಿಮ್ಮ ದೇವರಾದ ಯೆಹೋವ ದೇವರ ಅಪ್ಪಣೆಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ನಂಬಲಿಲ್ಲ. ಅವರ ಮಾತನ್ನೂ ಕೇಳಲಿಲ್ಲ. 24 ನಾನು ನಿಮ್ಮನ್ನು ತಿಳಿದಂದಿನಿಂದ ನೀವು ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬೀಳುವವರಾಗಿದ್ದೀರಿ.
25 ಹೀಗಿರಲಾಗಿ ಯೆಹೋವ ದೇವರು ನಿಮ್ಮನ್ನು ನಾಶಮಾಡುತ್ತೇನೆಂದು ಹೇಳಿದ್ದರಿಂದ, ನಾನು ಮುಂಚೆ ಬಿದ್ದುಕೊಂಡ ಹಾಗೆಯೇ ನಲವತ್ತು ದಿವಸ ಹಗಲುರಾತ್ರಿ ಯೆಹೋವ ದೇವರ ಮುಂದೆ ಬಿದ್ದಿದ್ದೆನು. 26 ನಾನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿ, “ಸಾರ್ವಭೌಮ ಯೆಹೋವ ದೇವರೇ, ನೀವು ನಿಮ್ಮ ಮಹಿಮೆಯಿಂದ ವಿಮೋಚಿಸಿ, ಬಲವಾದ ಕೈಯಿಂದ ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ ನಿಮ್ಮ ಜನರನ್ನು ನಾಶಮಾಡಬೇಡಿ. 27 ನಿಮ್ಮ ದಾಸರಾದ ಅಬ್ರಹಾಮ್, ಇಸಾಕ್, ಯಾಕೋಬರನ್ನು ಜ್ಞಾಪಕಮಾಡಿಕೊಳ್ಳಿರಿ. ಈ ಜನರ ಕಾಠಿಣ್ಯದ ಮೇಲೆಯೂ, ಅವರ ದುಷ್ಟತ್ವದ ಮೇಲೆಯೂ, ಅವರ ಪಾಪದ ಮೇಲೆಯೂ ದೃಷ್ಟಿ ಇಡಬೇಡಿ. 28 ನೀವು ಯಾವ ದೇಶದಿಂದ ನಮ್ಮನ್ನು ಬರಮಾಡಿದಿರೋ, ಆ ದೇಶದವರು, ‘ಯೆಹೋವ ದೇವರು ಇಸ್ರಾಯೇಲರಿಗೆ ವಾಗ್ದಾನ ಮಾಡಿದ ನಾಡಿಗೆ ಅವರನ್ನು ಸೇರಿಸಲಾರದೆ ಹಗೆಮಾಡಿ, ಮರುಭೂಮಿಯಲ್ಲಿ ಕೊಲ್ಲುವುದಕ್ಕೆ ಕರೆದುಕೊಂಡು ಹೋದರು’ ಎಂದು ಹೇಳುವುದಕ್ಕೆ ಆಸ್ಪದವಾದೀತು. 29 ಆದರೂ ನೀವು ನಿಮ್ಮ ದೊಡ್ಡ ಶಕ್ತಿಯಿಂದಲೂ, ನಿಮ್ಮ ಚಾಚಿದ ಕೈಯಿಂದಲೂ ಹೊರಗೆ ಬರಮಾಡಿದ ನಿಮ್ಮ ಜನವೂ ನಿಮ್ಮ ಸೊತ್ತೂ ಇವರೇ,” ಎಂದು ಹೇಳಿದೆನು.