24
ಒಬ್ಬನು ತಾನು ಮದುವೆಮಾಡಿಕೊಂಡ ಮಹಿಳೆಯಲ್ಲಿ ಏನೋ ಅವಲಕ್ಷಣವನ್ನು ಕಂಡು ಅವಳಲ್ಲಿ ಅಸಂತೃಪ್ತನಾದರೆ, ವಿವಾಹ ವಿಚ್ಛೇದನ ಪತ್ರವನ್ನು ಬರೆದು, ಅವಳ ಕೈಯಲ್ಲಿ ಕೊಟ್ಟು, ಅವಳನ್ನು ತನ್ನ ಮನೆಯಿಂದ ಕಳುಹಿಸಿಬಿಟ್ಟಾಗ, ಅವಳು ಅವನ ಮನೆಯನ್ನು ಬಿಟ್ಟುಹೋದ ಮೇಲೆ ಮತ್ತೊಬ್ಬನಿಗೆ ಹೆಂಡತಿಯಾಗಬಹುದು. ಆ ಮತ್ತೊಬ್ಬ ಗಂಡನು ಅವಳನ್ನು ಹಗೆಮಾಡಿ, ವಿವಾಹ ವಿಚ್ಛೇದನ ಪತ್ರವನ್ನು ಬರೆದು ಅವಳ ಕೈಯಲ್ಲಿ ಕೊಟ್ಟು, ತನ್ನ ಮನೆಯಿಂದ ಕಳುಹಿಸಿಬಿಟ್ಟರೆ, ಇಲ್ಲವೆ ಆ ಎರಡನೆಯ ಗಂಡನು ಸತ್ತರೆ, ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡ ಅವಳನ್ನು ಪುನಃ ಹೆಂಡತಿಯಾಗಿ ಸ್ವೀಕರಿಸಬಾರದು. ಅದು ಯೆಹೋವ ದೇವರ ಮುಂದೆ ಅಸಹ್ಯವೇ. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ದೋಷವುಂಟಾಗಲು ಅವಕಾಶ ಕೊಡಬಾರದು.
ಒಬ್ಬನು ಹೊಸದಾಗಿ ಮದುವೆಯಾಗಿದ್ದರೆ, ಅವನನ್ನು ಯುದ್ಧಕ್ಕೆ ಕಳುಹಿಸಬಾರದು ಅಥವಾ ಜವಾಬ್ದಾರಿಯ ಯಾವುದೊಂದೂ ಕೆಲಸವನ್ನು ಅವನಿಂದ ಮಾಡಿಸಬಾರದು. ಅವನು ಒಂದು ವರ್ಷ ಸ್ವತಂತ್ರನಾಗಿ ತನ್ನ ಮನೆಯಲ್ಲಿದ್ದು, ತಾನು ಮದುವೆಯಾದ ಹೆಂಡತಿಯೊಡನೆ ಸುಖವಾಗಿರಲಿ.
ಬೀಸುವ ಕಲ್ಲಿನಲ್ಲಿ ಅಡಿಗಲ್ಲನ್ನಾದರೂ, ಮೇಲಿನ ಕಲ್ಲನ್ನಾದರೂ ಒತ್ತೆಯಾಗಿ ತೆಗೆದುಕೊಳ್ಳಬಾರದು. ಹಾಗೆ ಮಾಡಿದರೆ, ಅದು ವ್ಯಕ್ತಿಯ ಜೀವನೋಪಾಯವನ್ನೇ ಒತ್ತೆಯಾಗಿ ತೆಗೆದುಕೊಂಡ ಹಾಗಿರುವುದು.
ಒಬ್ಬನು ತನ್ನ ಸಹೋದರರಾದ ಇಸ್ರಾಯೇಲರಲ್ಲಿ ಒಬ್ಬನನ್ನು ಕದ್ದು ಅವನನ್ನು ಗುಲಾಮನಾಗಿ ನಡೆಸಿಕೊಂಡದ್ದು ಅಥವಾ ಮಾರಿಬಿಟ್ಟದ್ದು ತಿಳಿದುಬಂದರೆ ಕದ್ದವನಿಗೆ ಮರಣಶಿಕ್ಷೆಯಾಗಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ನಡುವೆಯಿಂದ ತೆಗೆದುಹಾಕಬೇಕು.
ಕುಷ್ಠರೋಗಿಗಳ ವಿಷಯದಲ್ಲಿ ಲೇವಿಯರಾದ ಯಾಜಕರು ನಿಮಗೆ ಬೋಧಿಸುವುದನ್ನೆಲ್ಲಾ ನೀವು ಜಾಗ್ರತೆಯಿಂದ ಕಾಪಾಡಿ ಕೈಗೊಳ್ಳುವ ಹಾಗೆ ನೋಡಿಕೊಳ್ಳಿ. ನಾನು ಅವರಿಗೆ ಆಜ್ಞಾಪಿಸಿದ ನಿಯಮಗಳನ್ನು ನೀವು ಕಾಪಾಡಿ ಕೈಗೊಳ್ಳಬೇಕು. ನೀವು ಈಜಿಪ್ಟಿನಿಂದ ಹೊರಗೆ ಬಂದಾಗ, ಮಾರ್ಗದಲ್ಲಿ ನಿಮ್ಮ ದೇವರಾದ ಯೆಹೋವ ದೇವರು ಮಿರ್ಯಾಮಗಳಿಗೆ ಮಾಡಿದ್ದನ್ನು ಜ್ಞಾಪಕಮಾಡಿಕೊಳ್ಳಿರಿ.
10 ನಿನ್ನ ನೆರೆಯವನಿಗೆ ನೀವು ಯಾವುದೇ ರೀತಿಯ ಸಾಲಕೊಟ್ಟರೆ, ಅವನ ಒತ್ತೆಯನ್ನು ಕೇಳಲು ಅವನ ಮನೆಯಲ್ಲಿ ಪ್ರವೇಶಿಸಬಾರದು. 11 ನೀನು ಹೊರಗೆ ನಿಂತಿರಬೇಕು. ಸಾಲ ಕೊಟ್ಟವನೇ ಒತ್ತೆಯನ್ನು ನಿನಗೆ ಹೊರಗೆ ತರಬೇಕು. 12 ಅವನು ಬಡವನಾದರೆ, ಅವನ ಒತ್ತೆಯನ್ನು ಇಟ್ಟುಕೊಂಡು ರಾತ್ರಿ ಮಲಗಬೇಡ. 13 ನಿನ್ನ ನೆರೆಯವನು ಅದರಲ್ಲಿ ಮಲಗಲು ಸಾಯಂಕಾಲದ ಹೊತ್ತಿಗೆ ಅವನು ಹೊದ್ದುಕೊಳ್ಳುವ ವಸ್ತ್ರವನ್ನು ಹಿಂತಿರುಗಿಸು. ಆಗ ಅವನು ನಿನ್ನನ್ನು ಆಶೀರ್ವದಿಸುವನು. ನೀನು ಮಾಡಿದ್ದು ನಿನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ನೀತಿಯ ಕಾರ್ಯವೆಂದು ಪರಿಗಣಿಸಲಾಗುವುದು.
14 ನಿನ್ನ ನಾಡಿನ ಸಹೋದರನಾಗಲಿ, ಪರದೇಶಿಯವನಾಗಲಿ, ಬಡ ಮತ್ತು ನಿರ್ಗತಿಕನಾಗಿರುವ ಕೂಲಿಯವನನ್ನು ಬಾಧಿಸಬಾರದು. 15 ಅವನ ದಿನದ ಕೂಲಿಯನ್ನು ಆ ದಿನದಲ್ಲೇ ಸೂರ್ಯನು ಮುಳುಗುವುದರೊಳಗೆ ಅವನಿಗೆ ಕೊಡಬೇಕು. ಏಕೆಂದರೆ ಅವನು ಬಡವನಾಗಿದ್ದರಿಂದ ಅದನ್ನೇ ಎದುರು ನೋಡುತ್ತಿರುತ್ತಾನೆ. ನೀವು ಕೊಡದಿದ್ದರೆ, ಅವನು ನಿನಗೆ ವಿರೋಧವಾಗಿ ಯೆಹೋವ ದೇವರಿಗೆ ಮೊರೆಯಿಡುವನು. ಆಗ ನಿನ್ನ ಮೇಲೆ ಪಾಪದ ಹೊರೆ ಬಿದ್ದೀತು.
16 ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆಯ ಪಾಪಕ್ಕಾಗಿ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪದ ನಿಮಿತ್ತವೇ ಮರಣಶಿಕ್ಷೆಯನ್ನು ಹೊಂದಬೇಕು.
17 ಪರನಿಗೂ, ದಿಕ್ಕಿಲ್ಲದವನಿಗೂ ನ್ಯಾಯವನ್ನು ತಪ್ಪಿಸಬೇಡ. ವಿಧವೆಯಿಂದ ಉಡುವ ವಸ್ತ್ರವನ್ನು ಒತ್ತೆಯಾಗಿ ತೆಗೆದುಕೊಳ್ಳಬೇಡ. 18 ನೀನು ಈಜಿಪ್ಟಿನಲ್ಲಿ ದಾಸನಾಗಿದ್ದೆ ಎಂದೂ, ನಿನ್ನ ದೇವರಾದ ಯೆಹೋವ ದೇವರು ನಿನ್ನನ್ನು ಅಲ್ಲಿಂದ ವಿಮೋಚಿಸಿದರೆಂದೂ ಜ್ಞಾಪಕಮಾಡಿಕೊಳ್ಳಬೇಕು. ಆದ್ದರಿಂದ ಈ ಕಾರ್ಯಗಳನ್ನೆಲ್ಲಾ ಮಾಡಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.
19 ಹೊಲದಲ್ಲಿ ನಿನ್ನ ಪೈರನ್ನು ಕೊಯ್ಯುವಾಗ, ಹೊಲದಲ್ಲಿ ಸಿವುಡನ್ನು ಮರೆತುಬಿಟ್ಟರೆ, ಅದನ್ನು ತೆಗೆದುಕೊಳ್ಳುವುದಕ್ಕೆ ತಿರುಗಿಕೊಳ್ಳಬಾರದು. ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ. ನೀವು ಹೀಗೆ ನಡೆದುಕೊಂಡರೆ, ನಿನ್ನ ದೇವರಾದ ಯೆಹೋವ ದೇವರು ನಿನ್ನ ಎಲ್ಲಾ ದುಡಿಮೆಯಲ್ಲಿ ನಿನ್ನನ್ನು ಆಶೀರ್ವದಿಸುವರು. 20 ಓಲಿವ್ ಮರಗಳ ರೆಂಬೆಗಳನ್ನು ಹೊಡೆದು ಕಾಯಿಗಳನ್ನು ಉದುರಿಸಿದ ಮೇಲೆ ಪುನಃ ಉದುರಿಸುವದಕ್ಕೆ ಹೋಗಬಾರದು, ಮಿಕ್ಕಿದ್ದನ್ನು ಪರದೇಶದವನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ. 21 ದ್ರಾಕ್ಷಿತೋಟದ ಬೆಳೆಯನ್ನು ಕೂಡಿಸಿಕೊಳ್ಳುವಾಗ ಹಕ್ಕಲಾಯಬಾರದು. ಪರದೇಶಿ, ತಂದೆತಾಯಿ ಇಲ್ಲದ ವ್ಯಕ್ತಿ, ವಿಧವೆ ಇಂಥವರಿಗಾಗಿ ಅದನ್ನು ಬಿಟ್ಟುಬಿಡು. 22 ನೀವು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿ ವಾಸವಾಗಿದ್ದಿರಿ ಎಂದು ಜ್ಞಾಪಕಮಾಡಿಕೊಳ್ಳಿರಿ. ಆದ್ದರಿಂದ ಈ ಎಲ್ಲಾ ಕಾರ್ಯಗಳನ್ನು ಮಾಡಬೇಕೆಂದು ನಾನು ನಿಮಗೆ ಆಜ್ಞಾಪಿಸುತ್ತೇನೆ.