ಎಸ್ತೇರಳು
1
ರಾಣಿ ವಷ್ಟಿಯ ಪದಚ್ಯುತಿ
1 ಭಾರತ ದೇಶ ಮೊದಲುಗೊಂಡು ಇಥಿಯೋಪಿಯ ದೇಶದವರೆಗಿನ ನೂರ ಇಪ್ಪತ್ತೇಳು ಸಂಸ್ಥಾನಗಳನ್ನು ಅಹಷ್ವೇರೋಷನು ಆಳುತ್ತಿದ್ದನು. 2 ಆ ದಿವಸಗಳಲ್ಲಿ ಅರಸನಾದ ಅಹಷ್ವೇರೋಷನು ರಾಜಧಾನಿಯಾದ ಶೂಷನಿನಲ್ಲಿ ಅರಮನೆಯಲ್ಲಿರುವ ತನ್ನ ರಾಜಸಿಂಹಾಸನದ ಮೇಲೆ ಕುಳಿತಿರುವಾಗ 3 ತನ್ನ ಆಳಿಕೆಯ ಮೂರನೆಯ ವರ್ಷದಲ್ಲಿ ಅವನು ತನ್ನ ಸಮಸ್ತ ಶ್ರೇಷ್ಠರಿಗೂ ಅಧಿಕಾರಿಗಳಿಗೂ ಔತಣವನ್ನು ಮಾಡಿಸಿದನು. ಪಾರಸಿಯ ಮತ್ತು ಮೇದ್ಯ ದೇಶಗಳ ಸೇನಾಧಿಪತಿಗಳೂ ಪ್ರಾಂತಗಳ ಶ್ರೇಷ್ಠರೂ ಪ್ರಧಾನರೂ ಉಪಸ್ಥಿತರಿದ್ದರು.
4 ಅವನು ನೂರ ಎಂಬತ್ತು ದಿವಸಗಳವರೆಗೆ ತನ್ನ ಘನವುಳ್ಳ ರಾಜ್ಯದ ಐಶ್ವರ್ಯವನ್ನೂ ತನ್ನ ವೈಭವ ಹಾಗು ಆಡಂಬರವನ್ನು ತೋರಿಸಿದನು. 5 ಆ ದಿವಸಗಳು ತೀರಿದ ತರುವಾಯ ಅರಸನು ಶೂಷನಿನ ಅರಮನೆಯಲ್ಲಿರುವ ಹಿರಿಕಿರಿಯರಾದ ಸಮಸ್ತ ಜನರಿಗೂ ಏಳು ದಿವಸಗಳವರೆಗೆ ಅರಸನ ಅರಮನೆಯ ತೋಟದ ಅಂಗಳದಲ್ಲಿ ಔತಣವನ್ನು ಮಾಡಿಸಿದನು. 6 ಅಲ್ಲಿ ಬಿಳಿ ಕಲ್ಲಿನ ಕಂಬಗಳಿಗೆ ಬೆಳ್ಳಿಯ ಉಂಗುರಗಳಿಂದಲೂ ರಕ್ತವರ್ಣದ ನಯವಾದ ನಾರು ಹಗ್ಗಗಳಿಂದಲೂ ತೂಗು ಹಾಕಲಾಗಿದ್ದವು. ಬಿಳಿ ಹಸಿರೂ ನೀಲವರ್ಣವೂ ಆದ ತೆರೆಗಳಿದ್ದವು. ಮಂಚಗಳು ಬೆಳ್ಳಿ ಬಂಗಾರದವುಗಳಾಗಿ ಕೆಂಪು, ನೀಲಿ, ಬಿಳಿ, ಕಪ್ಪು ಬಣ್ಣಗಳ ಅಮೃತಶಿಲೆಗಳಿಂದ ರಚಿತವಾದ ನೆಲದ ಮೇಲೆ ಇಡಲಾಗಿದ್ದವು. 7 ಇದಲ್ಲದೆ ನಾನಾ ವಿಧವಾದ ಬಂಗಾರದ ಪಾತ್ರೆಗಳಲ್ಲಿ ಅರಸನ ಔದಾರ್ಯಕ್ಕೆ ತಕ್ಕಂತೆ ದ್ರಾಕ್ಷಾರಸವನ್ನು ಧಾರಾಳವಾಗಿ ಕುಡಿಯಲು ಕೊಟ್ಟರು. 8 ಮಧುಪಾನ ಸೇವನೆಯಲ್ಲಿ ಪ್ರತಿಯೊಬ್ಬನಿಗೂ ತನ್ನ ಇಚ್ಛಾನುಸಾರ ಕೊಡಬೇಕೆಂತಲೂ ಯಾರಿಗೂ ಒತ್ತಾಯ ಮಾಡಬಾರದೆಂದೂ ಸೇವಕರಿಗೆ ಅರಸನು ಆದೇಶವಿತ್ತಿದ್ದನು.
9 ಇದಲ್ಲದೆ ರಾಣಿಯಾದ ವಷ್ಟಿ ಅರಸನಾದ ಅಹಷ್ವೇರೋಷನ ಅರಮನೆಯಲ್ಲಿದ್ದ ಸ್ತ್ರೀಯರಿಗೆ ಔತಣವನ್ನು ಮಾಡಿಸಿದಳು.
10-11 ಏಳನೆಯ ದಿವಸದಲ್ಲಿ ಅರಸನಾದ ಅಹಷ್ವೇರೋಷನು ದ್ರಾಕ್ಷಾರಸದಿಂದ ಅಮಲೇರಿದಾಗ ಬಹುರೂಪವತಿಯಾದ ವಷ್ಟಿ ರಾಣಿಯ ಸೌಂದರ್ಯವನ್ನು ಜನರಿಗೂ ಪ್ರಧಾನರಿಗೂ ಪ್ರದರ್ಶಿಸುವುದಕ್ಕೆ ರಾಣಿಗೆ ರಾಜಕಿರೀಟವನ್ನು ಧರಿಸಿಕೊಂಡು ತನ್ನ ಮುಂದೆ ಕರೆದುಕೊಂಡು ಬರುವುದಕ್ಕೆ ಅರಸನಾದ ಅಹಷ್ವೇರೋಷನ ಸಮ್ಮುಖದಲ್ಲಿ ಸೇವೆ ಮಾಡುವ ಮೆಹೂಮಾನ್, ಬಿಜೆತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೇತರ್, ಕರಕಾಸ್ ಎಂಬ ಏಳುಮಂದಿ ಕಂಚುಕಿಗಳಿಗೆ ಹೇಳಿದನು. 12 ಆದರೆ ಅರಸನು ಅವರಿಂದ ಹೇಳಿ ಕಳುಹಿಸಿದ ಮಾತಿಗೆ ವಷ್ಟಿ ರಾಣಿಯು, “ನಾನು ಬರುವುದಿಲ್ಲ,” ಎಂದು ಹೇಳಿದಳು. ಆದ್ದರಿಂದ ಅರಸನು ಬಹುಕೋಪಗೊಂಡು, ರೋಷಾವೇಶನಾದನು.
13 ಆಗ ನೀತಿ ನ್ಯಾಯಗಳನ್ನು ತಿಳಿದ ಪಂಡಿತರೆಲ್ಲರೊಂದಿಗೆ ಅರಮನೆಯ ಸಂಗತಿಗಳನ್ನು ಆಲೋಚಿಸುವುದು ಅರಸನ ಪದ್ಧತಿಯಾಗಿತ್ತು. ಆದುದರಿಂದ ಅರಸನು ಕಾಲಜ್ಞಾನಿಗಳ ಸಂಗಡ ಈ ವಿಷಯವಾಗಿ ವಿಚಾರಿಸಿದನು. 14 ಅರಸನಿಗೆ ಬಹು ಹತ್ತಿರವಾಗಿದ್ದ ಪಾರಸಿಯ ಮತ್ತು ಮೇದ್ಯ ದೇಶಗಳ ಏಳುಮಂದಿ ಪ್ರಧಾನರಾದ ಕರ್ಷೇನಾ, ಶೆತಾರ್, ಅದ್ಮಾತಾ, ತಾರ್ಷೀಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಇವರ ಸಂಗಡ ಮಾತನಾಡಿದನು. ರಾಜ್ಯದಲ್ಲಿ ಇವರು ಅರಸನ ಬಳಿಗೆ ಹೋಗಲು ವಿಶೇಷ ಅನುಮತಿಪಡೆದ ಅತ್ಯಂತ ಶ್ರೇಷ್ಠರಾಗಿದ್ದರು.
15 ಅಹಷ್ವೇರೋಷನು, “ಅರಸನ ಅಧಿಕಾರಿಗಳ ಮುಖಾಂತರ ಹೇಳಿ ಕಳುಹಿಸಿದ ರಾಜಾಜ್ಞೆಯನ್ನು ಉಲ್ಲಂಘಿಸಿದ ವಷ್ಟಿ ರಾಣಿಯ ವಿರುದ್ಧ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕಾದ ಕ್ರಮವೇನು?” ಎಂದು ಕೇಳಿದನು.
16 ಮೆಮೂಕಾನನು ಅರಸನ ಮುಂದೆಯೂ ಪ್ರಧಾನರ ಮುಂದೆಯೂ, “ವಷ್ಟಿ ರಾಣಿಯು ಅರಸನಿಗೆ ಮಾತ್ರವಲ್ಲ ಅರಸನಾದ ಅಹಷ್ವೇರೋಷನ ಸಮಸ್ತ ಪ್ರಾಂತಗಳಲ್ಲಿರುವ ಸಮಸ್ತ ಶ್ರೇಷ್ಠರಿಗೂ ಸಮಸ್ತ ಜನರಿಗೂ ಅಪರಾಧಮಾಡಿದ್ದಾಳೆ. 17 ರಾಣಿಯ ವರ್ತನೆ ಇತರ ಎಲ್ಲಾ ಸ್ತ್ರೀಯರಿಗೂ ತಿಳಿದುಬರುವುದು. ‘ಅರಸನಾದ ಅಹಷ್ವೇರೋಷನು ವಷ್ಟಿರಾಣಿಯನ್ನು ತನ್ನ ಮುಂದೆ ಬರಲು ಹೇಳಿ ಕಳುಹಿಸಿದನು. ಆದರೆ ಅವಳು ಬರಲು ನಿರಾಕರಿಸಿದಳು,’ ಎಂದು ಹೇಳಿಕೊಂಡು ಅವರು ತಮ್ಮ ಗಂಡಂದಿರನ್ನೂ ತಿರಸ್ಕರಿಸುವರು. 18 ಇದಲ್ಲದೆ ರಾಣಿಯ ಮಾತನ್ನು ಕೇಳಿದ ಪಾರಸಿಯ ಮತ್ತು ಮೇದ್ಯ ರಾಣಿಯರೆಲ್ಲರೂ ಈ ಹೊತ್ತು ಅರಸನ ಶ್ರೇಷ್ಠರಿಗೂ ಹಾಗೆಯೇ ಹೇಳುವರು. ಹೀಗೆಯೇ ತಿರಸ್ಕಾರವೂ ರೌದ್ರವೂ ಬಹಳ ಉಂಟಾಗುವುದು.
19 “ಅರಸನಿಗೆ ಸಮ್ಮತಿಯಾದರೆ, ವಷ್ಟಿಯು ಅರಸನಾದ ಅಹಷ್ವೇರೋಷನ ಮುಂದೆ ಇನ್ನು ಮೇಲೆ ಬರಬಾರದೆಂದೂ ಅರಸನು ಅವಳ ರಾಜಸ್ಥಿತಿಯನ್ನು ಅವಳಿಗಿಂತ ಉತ್ತಮಳಾದ ಮತ್ತೊಬ್ಬಳಿಗೆ ಕೊಡಲಿ ಎಂದೂ ರಾಜಾಜ್ಞೆಯು ಹೊರಟು ಅದು ರದ್ದಾಗದ ಹಾಗೆ ಪಾರಸಿಯರ ಮತ್ತು ಮೇದ್ಯರ ಕಾನೂನುಗಳಲ್ಲಿ ಲಿಖಿತವಾಗಲಿ. 20 ಈ ಪ್ರಕಾರ ಅರಸನು ಮಾಡಿದ ಆಜ್ಞೆಯು ತನ್ನ ವಿಸ್ತಾರವಾದ ರಾಜ್ಯವೆಲ್ಲ ಗೊತ್ತಾದಾಗ ಸ್ತ್ರೀಯರೆಲ್ಲರೂ ಹಿರಿಯರಿಂದ ಚಿಕ್ಕವರವರೆಗೂ ತಮ್ಮ ಗಂಡಂದಿರಿಗೆ ಗೌರವಕೊಡುವರು,” ಎಂದು ಸಲಹೆ ನೀಡಿದನು.
21 ಈ ಮಾತು ಅರಸನಿಗೂ ಶ್ರೇಷ್ಠರಿಗೂ ಸರಿಯೆಂದು ತೋರಿತು. ಆದುದರಿಂದ ಅರಸನು ಮೆಮೂಕಾನ್ ಮಾತಿನಂತೆಯೇ ಮಾಡಿದನು. 22 ಪ್ರತಿಯೊಂದು ಕುಟುಂಬದಲ್ಲಿಯೂ ಪುರುಷನೇ ಅಧಿಕಾರ ನಡೆಸಬೇಕೆಂದೂ, ತನ್ನ ಸ್ವಜನರ ಭಾಷೆಯಲ್ಲಿಯೇ ವ್ಯವಹಾರ ನಡೆಸಬೇಕೆಂದೂ ಪ್ರಾಂತಗಳ ಹಾಗೂ ಜನಸಾಮಾನ್ಯರ ಭಾಷೆಗಳಲ್ಲಿ ಅರಸನು ಸಮಸ್ತ ಸಂಸ್ಥಾನಗಳಿಗೂ ಪತ್ರಗಳನ್ನು ಬರೆದು ಕಳುಹಿಸಿದನು.