11
ಚೊಚ್ಚಲು ಮಕ್ಕಳ ಮೇಲೆ ಉಪದ್ರವ
ಯೆಹೋವ ದೇವರು ಮೋಶೆಗೆ, “ಇನ್ನು ಒಂದೇ ಉಪದ್ರವವನ್ನು ಫರೋಹನ ಮೇಲೆಯೂ, ಈಜಿಪ್ಟ್ ಮೇಲೆಯೂ ಬರಮಾಡುವೆನು. ಆಮೇಲೆ ಅವನು ಇಲ್ಲಿಂದ ಕಳುಹಿಸುವನು. ಇಲ್ಲಿಂದ ನಿಮ್ಮನ್ನು ನಿಶ್ಚಯವಾಗಿ ಬಲವಂತದಿಂದ ಎಲ್ಲರನ್ನೂ ಕಳುಹಿಸಿಬಿಡುವನು. ಆದ್ದರಿಂದ ಸ್ತ್ರೀಪುರುಷರೆಲ್ಲರು ತನ್ನ ನೆರೆಯವನಿಂದಲೂ ಬೆಳ್ಳಿಬಂಗಾರ ಒಡವೆಗಳನ್ನು ಕೇಳಿಕೊಳ್ಳಬೇಕೆಂದು ಇಸ್ರಾಯೇಲರಿಗೆ ಹೇಳು,” ಎಂದು ಹೇಳಿದರು. ಇದಲ್ಲದೆ ಯೆಹೋವ ದೇವರು ಈಜಿಪ್ಟಿನವರ ದೃಷ್ಟಿಯಲ್ಲಿ ಜನರಿಗೆ ದಯೆ ದೊರಕುವಂತೆ ಮಾಡಿದರು. ಇದಲ್ಲದೆ ಮೋಶೆಯು ಈಜಿಪ್ಟ್ ದೇಶದಲ್ಲಿಯೂ ಫರೋಹನ ಅಧಿಕಾರಿಗಳ ದೃಷ್ಟಿಯಲ್ಲಿಯೂ ಜನರ ದೃಷ್ಟಿಯಲ್ಲಿಯೂ ಬಹಳ ಗೌರವ ಹೊಂದಿದನು.
ಆಗ ಮೋಶೆಯು ಫರೋಹನಿಗೆ, “ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಸುಮಾರು ಮಧ್ಯರಾತ್ರಿಯಲ್ಲಿ ನಾನು ಈಜಿಪ್ಟಿನ ಮಧ್ಯದಲ್ಲಿ ಹಾದು ಹೋಗುವೆನು. ಆಗ ಈಜಿಪ್ಟ್ ದೇಶದ ಚೊಚ್ಚಲ ಮಕ್ಕಳು ಅಂದರೆ, ಸಿಂಹಾಸನದ ಮೇಲೆ ಕೂತಿರುವ ಫರೋಹನ ಚೊಚ್ಚಲ ಮಗನು ಮೊದಲುಗೊಂಡು ಬೀಸುವ ಕಲ್ಲನ್ನು ಹಿಡಿದಿರುವ ದಾಸಿಯ ಚೊಚ್ಚಲ ಮಗನವರೆಗೆ ಮತ್ತು ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವೂ ಸಾಯುವುವು. ಈಜಿಪ್ಟ್ ದೇಶದಲ್ಲೆಲ್ಲಾ ದೊಡ್ಡ ಗೋಳಾಟವಿರುವುದು. ಅಂಥಾ ಗೋಳಾಟವು ಹಿಂದೆಯೂ ಇರಲಿಲ್ಲ, ಇನ್ನು ಮುಂದೆಯೂ ಇರುವುದಿಲ್ಲ. ಆದರೆ ಯೆಹೋವ ದೇವರು ಈಜಿಪ್ಟಿನವರಿಗೂ, ಇಸ್ರಾಯೇಲರಿಗೂ ಮಧ್ಯದಲ್ಲಿಟ್ಟಿರುವ ವ್ಯತ್ಯಾಸವನ್ನು ನೀವು ತಿಳುಕೊಳ್ಳುವಂತೆ, ಇಸ್ರಾಯೇಲಿನವರ ವಿರುದ್ಧ ಇಲ್ಲವೆ ಪ್ರಾಣಿಗಳ ವಿರುದ್ಧ ಒಂದು ನಾಯಿ ಸಹ ಬೊಗಳುವುದಿಲ್ಲ.’ ಆಗ ನಿನ್ನ ದಾಸರಾದ ಇವರೆಲ್ಲರೂ ನನ್ನ ಬಳಿಗೆ ಬಂದು, ನನಗೆ ಅಡ್ಡಬಿದ್ದು, ನನಗೆ ನೀನೂ, ನಿನ್ನನ್ನು ಹಿಂಬಾಲಿಸುವ ಜನರೆಲ್ಲರೂ, ‘ಹೊರಗೆ ಹೋಗಿರಿ,’ ಎಂದು ಹೇಳುವರು. ತರುವಾಯ ನಾನು ಹೊರಗೆ ಹೋಗುವೆನು,” ಎಂದು ಹೇಳಿ ಮೋಶೆಯು ಕೋಪಾವೇಶವುಳ್ಳವನಾಗಿ ಫರೋಹನ ಬಳಿಯಿಂದ ಹೊರಟುಹೋದನು.
ಆದರೆ ಯೆಹೋವ ದೇವರು ಮೋಶೆಗೆ, “ನನ್ನ ಅದ್ಭುತಗಳು ಈಜಿಪ್ಟ್ ದೇಶದಲ್ಲಿ ಹೆಚ್ಚಾಗುವಂತೆ ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ,” ಎಂದರು. 10 ಈ ಅದ್ಭುತಗಳನ್ನೆಲ್ಲಾ ಮೋಶೆ ಆರೋನರು ಫರೋಹನ ಮುಂದೆ ಮಾಡಿದರು. ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ, ಅವನು ಇಸ್ರಾಯೇಲರನ್ನು ತನ್ನ ದೇಶದೊಳಗಿಂದ ಕಳುಹಿಸಲಿಲ್ಲ.