2
ಪ್ರವಾದಿಯಾಗಲು ಯೆಹೆಜ್ಕೇಲನಿಗೆ ಕರೆ
1 ಯೆಹೋವ ದೇವರು ನನಗೆ, “ಮನುಷ್ಯಪುತ್ರನೇ, ಎದ್ದು ನಿಲ್ಲು, ನಿನ್ನ ಸಂಗಡ ಮಾತನಾಡಬೇಕು.” 2 ಹೀಗೆ ಅವರು ನನ್ನ ಸಂಗಡ ಮಾತನಾಡುವಾಗ, ದೇವರಾತ್ಮರು ನನ್ನೊಳಗೆ ಪ್ರವೇಶಿಸಿ, ನನ್ನನ್ನು ನಿಂತುಕೊಳ್ಳುವಂತೆ ಮಾಡಿದರು. ಆಗ ಅವರು ನನ್ನೊಂದಿಗೆ ಮಾತನಾಡುವುದನ್ನು ಚೆನ್ನಾಗಿ ಕೇಳಿದೆನು.
3 ಅವರು, “ಮನುಷ್ಯಪುತ್ರನೇ, ನನಗೆ ವಿರೋಧವಾಗಿ ತಿರುಗಿ ಬಿದ್ದಿರುವ ಮತ್ತು ದ್ರೋಹಮಾಡಿದ ಜನಾಂಗದವರಾದ ಇಸ್ರಾಯೇಲರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ. ಅವರೂ, ಅವರ ಪಿತೃಗಳೂ ಇಂದಿನವರೆಗೂ ನನಗೆ ವಿರೋಧವಾಗಿ ದ್ರೋಹ ಮಾಡಿದ್ದಾರೆ. 4 ಅವರು ಕಠಿಣ ಹೃದಯದವರು ಮತ್ತು ಹಠಮಾರಿ ಆಗಿದ್ದಾರೆ. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತೇನೆ. ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ,’ ಎಂದು ಹೇಳಬೇಕು. 5 ಅವರು ಕೇಳಲಿ ಅಥವಾ ಕೇಳದೇ ಇರಲಿ, ಏಕೆಂದರೆ ಅವರು ತಿರುಗಿಬೀಳುವ ಜನರು, ಆದರೆ ತಮ್ಮೊಳಗೆ ಪ್ರವಾದಿ ಇರುವನೆಂದು ತಿಳಿದುಕೊಂಡರೆ ಸಾಕು. 6 ಮನುಷ್ಯಪುತ್ರನೇ, ನೀನು ಮುಳ್ಳುಪೊದೆಗಳಲ್ಲಿ ಸಿಕ್ಕಿಕೊಂಡು, ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯೆ ಇದ್ದರೂ, ಅವರಿಗೆ ಭಯಪಡಬೇಡ. ಅವರ ಗದರಿಕೆಗೆ ಹೆದರದಿರು. ಅವರು ದ್ರೋಹಿ ವಂಶದವರು. ಅವರ ಬಿರುನುಡಿಗೆ ದಿಗಿಲು ಪಡಬೇಡ. 7 ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು. ಅವರು ಕೇಳಿದರೂ ಸರಿ, ಕೇಳದಿದ್ದರೂ ಸರಿ, ಏಕೆಂದರೆ ಅವರು ತಿರುಗಿಬೀಳುವ ಜನರು. 8 ಆದರೆ ಮನುಷ್ಯಪುತ್ರನೇ, ನೀನಾದರೋ ನಾನು ಹೇಳುವುದನ್ನು ಕೇಳು: ಆ ತಿರುಗಿಬೀಳುವ ಜನರ ಹಾಗೆ ನೀನೂ ತಿರುಗಿಬೀಳಬೇಡ. ನಿನ್ನ ಬಾಯನ್ನು ತೆರೆದು ನಾನು ನಿನಗೆ ಕೊಡುವುದನ್ನು ತಿನ್ನು,” ಎಂದರು.
9 ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು. ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು. 10 ಆ ಸುರುಳಿಯನ್ನು ನನ್ನೆದುರಿನಲ್ಲೇ ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಪ್ರಲಾಪ, ಶೋಕ ಮತ್ತು ಶಾಪದ ಪದಗಳನ್ನು ಬರೆಯಲಾಗಿತ್ತು.