24
ಅಡುಗೆಯ ಪಾತ್ರೆಯಾಗಿ ಯೆರೂಸಲೇಮ
ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು: “ಮನುಷ್ಯಪುತ್ರನೇ, ಈ ದಿನದ, ಇದೇ ದಿನದ ಹೆಸರನ್ನು ಬರೆದುಕೋ. ಅದೇ ದಿನದಲ್ಲಿ ಬಾಬಿಲೋನಿನ ಅರಸನು ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಾನೆ. ದಂಗೆಕೋರ ಮನೆತನದವರಿಗೆ ಸಾಮ್ಯವನ್ನು ತಿಳಿಸಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ ‘ಹಂಡೆಯನ್ನು ಒಲೆಯ ಮೇಲಿಡು,
ಮೇಲಿಟ್ಟು ಅದರಲ್ಲಿ ನೀರನ್ನು ಸುರಿ.
ಮಾಂಸದ ತುಂಡುಗಳನ್ನೂ ತೊಡೆಯನ್ನೂ ಹೆಗಲನ್ನೂ
ಎಲ್ಲಾ ಒಳ್ಳೆಯ ತುಂಡುಗಳನ್ನೂ ಒಟ್ಟಿಗೆ ಸೇರಿಸಿ
ಒಳ್ಳೆಯ ಎಲುಬುಗಳ ಜೊತೆ ಅದನ್ನು ತುಂಬಿಸು.
ಹಿಂಡಿನಲ್ಲಿ ಶ್ರೇಷ್ಠವಾದದ್ದನ್ನು ತೆಗೆದುಕೊಂಡು
ಎಲುಬಿನ ರಾಶಿಯನ್ನೂ ಅದರ ಕೆಳಗೆ ಇಟ್ಟು
ಅದನ್ನು ಚೆನ್ನಾಗಿ ಕುದಿಸು;
ಆ ಎಲುಬುಗಳೂ ಅದರಲ್ಲಿ ಚೆನ್ನಾಗಿ ಬೇಯಲಿ.
 
“ ‘ಆದಕಾರಣ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ ‘ರಕ್ತಮಯವಾದ ಆ ಪಟ್ಟಣಕ್ಕೆ ಕಷ್ಟ!
ಯಾವುದರ ಕಲ್ಮಶವು ಹೊರಗೆ ಬಾರದೆ ಅದರಲ್ಲಿ ಉಳಿದಿರುವುದೋ
ಆ ಹಂಡೆಗೆ ಕಷ್ಟ!
ಅದರಿಂದ ತುಂಡುತುಂಡಾಗಿ ಹೊರಗೆ ತೆಗೆ.
ಆಯ್ಕೆಯ ಚೀಟಿಯು ಅದರ ಮೇಲೆ ಬೀಳದಿರಲಿ.
 
“ ‘ಅದರ ರಕ್ತವು ಅದರ ಮಧ್ಯದಲ್ಲಿದೆ;
ಅದು ಅದನ್ನು ಬಂಡೆಯ ತುದಿಯಲ್ಲಿ ಇಟ್ಟಿದೆ.
ಧೂಳು ಮುಚ್ಚುವ ಹಾಗೆ
ನೆಲದ ಮೇಲೆ ಚೆಲ್ಲಲಿಲ್ಲ.
ಮುಯ್ಯಿಗೆ ಮುಯ್ಯಿ ತೀರಿಸುವುದಕ್ಕೆ ರೋಷವನ್ನೆಬ್ಬಿಸುವ ಹಾಗೆ
ನಾನು ಅದರ ರಕ್ತಾಪರಾಧವನ್ನು ಮುಚ್ಚಿ ಬಿಡದಂತೆ
ಬಂಡೆಯ ತುದಿಯ ಮೇಲೆ ಇಟ್ಟಿದ್ದೇನೆ.
 
“ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:
“ ‘ಆ ರಕ್ತಾಪರಾಧವುಳ್ಳ ಪಟ್ಟಣಕ್ಕೆ ಕಷ್ಟ!
ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು.
10 ಬಹಳ ಸೌದೆ ಹಾಕಿ,
ಬೆಂಕಿಯನ್ನು ಹೆಚ್ಚಿಸಿ,
ಮಾಂಸವನ್ನು ಚೆನ್ನಾಗಿ ಬೇಯಿಸು;
ಮಸಾಲೆ ಚೆನ್ನಾಗಿ ಇರಲಿ,
ಎಲುಬುಗಳು ಸುಡಲಿ.
11 ಆಮೇಲೆ ಹಂಡೆಯು ಕಾದು
ತಾಮ್ರವು ಕೆಂಪಾಗಿ,
ಒಳಗಣ ಕಲ್ಮಶವು ಕರಗಿ ಕಿಲುಬು ಇಲ್ಲವಾಗುವಂತೆ
ಅದನ್ನು ಬರಿದುಮಾಡಿ ಕೆಂಡಗಳ ಮೇಲೆ ಇಡು.
12 ಅದರ ಕಲ್ಮಶವು ನನ್ನಲ್ಲಿ ಆಯಾಸವನ್ನುಂಟು ಮಾಡೀತೆ ಹೊರತು
ಅದಕ್ಕೆ ಹತ್ತಿದ್ದ ಆ ಬಹಳವಾದ ಕಿಲುಬು ಹೋಗಲಿಲ್ಲ.
ಅದು ಬೆಂಕಿಯಿಂದಲೂ ನೀಗಲಿಲ್ಲ.
13 “ ‘ನಿನ್ನ ಅಶುದ್ಧತ್ವವು ದುಷ್ಕರ್ಮವುಳ್ಳದ್ದು. ನಾನು ನಿನ್ನನ್ನು ಪರಿಶುದ್ಧಮಾಡಿದರೂ ನೀನು ಶುದ್ಧವಾಗದ ಕಾರಣ ನಾನು ನನ್ನ ರೋಷವನ್ನು ನಿನ್ನ ಮೇಲೆ ಕಳುಹಿಸುವಷ್ಟು ಕಾಲದವರೆಗೂ ಇನ್ನು ಮೇಲೆ ನೀನು ನಿನ್ನ ಅಪವಿತ್ರದಿಂದ ಇನ್ನು ಶುದ್ಧವಾಗುವುದಿಲ್ಲ.
 
14 “ ‘ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ. ನಾನು ಕೆಲಸ ಮಾಡುವ ಸಮಯ ಬಂದಿದೆ. ನಾನು ಅದನ್ನು ಮಾಡದೆ ಬಿಡುವುದಿಲ್ಲ. ಕಟಾಕ್ಷ ತೋರಿಸುವುದಿಲ್ಲ. ಹಿಂದೆಗೆಯೆನು. ನಿನ್ನ ಮಾರ್ಗಗಳ ಪ್ರಕಾರವೂ ನಿನ್ನ ಕ್ರಿಯೆಗಳ ಪ್ರಕಾರವೂ ನಿನಗೆ ನ್ಯಾಯತೀರಿಸುವೆನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
ಯೆಹೆಜ್ಕೇಲನ ಹೆಂಡತಿಯು ಸತ್ತುಹೋದದ್ದು
15 ಯೆಹೋವ ದೇವರ ವಾಕ್ಯವು ನನಗೆ ಬಂದಿತು: 16 “ಮನುಷ್ಯಪುತ್ರನೇ, ಒಂದೇ ಏಟಿನಿಂದ ನೇತ್ರಾನಂದವಾಗಿರುವುದನ್ನು ನಿನ್ನಿಂದ ತೆಗೆಯುತ್ತೇನೆ. ಆದರೆ ನೀನು ದುಃಖಪಡಬೇಡ, ಅಳಬೇಡ, ನಿನ್ನ ಕಣ್ಣೀರು ಹರಿದು ಹೋಗದಿರಲಿ. 17 ಸದ್ದಿಲ್ಲದೆ ಮೊರೆಯಿಡು, ವಿಯೋಗ ದುಃಖ ತೋರಿಸಬೇಡ. ಮುಂಡಾಸವನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ನಿನ್ನ ಮೀಸೆ ಮತ್ತು ಗಡ್ಡವನ್ನು ಮುಚ್ಚಿಕೊಳ್ಳಬೇಡ, ದುಃಖಿಸುವವರ ಸಾಂಪ್ರದಾಯಿಕ ಆಹಾರವನ್ನು ತಿನ್ನಬೇಡಿರಿ.”
18 ಹಾಗೆಯೇ ನಾನು ಬೆಳಗಿನ ಜಾವದಲ್ಲಿ ಜನರೊಂದಿಗೆ ಮಾತನಾಡಿದೆನು. ಸಂಜೆ ನನ್ನ ಹೆಂಡತಿ ಸತ್ತಳು. ಮರುದಿನ ಬೆಳಿಗ್ಗೆ ನಾನು ಆಜ್ಞಾಪಿಸಿದಂತೆ ಮಾಡಿದೆನು.
19 ಆಗ ಜನರು, “ನೀನು ಮಾಡುವ ಆ ಸಂಗತಿಗಳಿಂದ ನಮಗೆ ಪ್ರಯೋಜನವೇನೆಂದು ತಿಳಿಸುವುದಿಲ್ಲವೇ? ಯಾಕೆ ಹೀಗೆ ವರ್ತಿಸುತ್ತಿದ್ದೀಯಾ?” ಎಂದು ಕೇಳಿದರು.
20 ಆದ್ದರಿಂದ ನಾನು ಅವರಿಗೆ ಹೀಗೆ ಹೇಳಿದೆನು, “ಯೆಹೋವ ದೇವರ ವಾಕ್ಯವು ನನಗೆ ಬಂದಿತು, 21 ಇಸ್ರಾಯೇಲರ ಮನೆತನದವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ ಎಂದು ಹೇಳು: ಇಗೋ, ನಾನು ನನ್ನ ಪವಿತ್ರಾಲಯವನ್ನೂ, ನಿಮ್ಮ ಮುಖ್ಯಬಲವನ್ನೂ, ನಿಮ್ಮ ನೇತ್ರಾನಂದಕರವಾದದ್ದನ್ನೂ, ನಿಮ್ಮ ಮನಸ್ಸು ಅಭಿಲಾಷಿಸುವುದನ್ನೂ ನಾನು ಅಪವಿತ್ರಪಡಿಸುವೆನು; ನೀವು ಬಿಟ್ಟಿರುವ ನಿಮ್ಮ ಗಂಡು ಮತ್ತು ಹೆಣ್ಣುಮಕ್ಕಳು ಖಡ್ಗದಿಂದ ಬೀಳುವರು. 22 ನಾನು ಮಾಡಿದ ಹಾಗೆ ನೀವು ಮಾಡುವಿರಿ; ನಿಮ್ಮ ಮೀಸೆ ಮತ್ತು ಗಡ್ಡವನ್ನು ಮುಚ್ಚಿಕೊಳ್ಳುವುದಿಲ್ಲ ಅಥವಾ ದುಃಖಿಸುವವರ ಸಾಂಪ್ರದಾಯಿಕ ಆಹಾರವನ್ನು ತಿನ್ನುವುದಿಲ್ಲ. 23 ನಿಮ್ಮ ಮುಂಡಾಸಗಳು ನಿಮ್ಮ ತಲೆಯ ಮೇಲೆಯೂ ನಿಮ್ಮ ಪಾದರಕ್ಷೆಯು ನಿಮ್ಮ ಪಾದಗಳ ಅಡಿಯಲ್ಲಿಯೂ ಇರುವುವು. ನೀವು ಗೋಳಾಡದೆ ಅಳದೆ ನಿಮ್ಮ ಅಕ್ರಮಗಳಿಂದ ಕುಂದಿಹೋಗಿ ಒಬ್ಬರ ಸಂಗಡಲೊಬ್ಬರು ನರಳುವಿರಿ. 24 ಹೀಗೆ ಯೆಹೆಜ್ಕೇಲನು ನಿಮಗೆ ಮುಂಗುರುತಾಗಿರುವನು; ಅವನು ಮಾಡಿದ ಎಲ್ಲವುಗಳ ಹಾಗೆ ನೀವು ಮಾಡುವಿರಿ. ಈ ರೀತಿ ಆದಾಗ ನಾನೇ ಸಾರ್ವಭೌಮ ಯೆಹೋವ ದೇವರೆಂದು ತಿಳಿಯುವಿರಿ.’
25 “ಮನುಷ್ಯಪುತ್ರನೇ, ಅವರ ಮಹತ್ತರ ಸಂತೋಷವನ್ನೂ ಅವರ ನೇತ್ರಾನಂದಕರವಾದದ್ದನ್ನೂ ಅವರು ಆಶಿಸುವುದನ್ನೂ ಅವರ ಪುತ್ರಪುತ್ರಿಯರನ್ನೂ ಅವರ ಬಲದಿಂದ ನಾನು ತೆಗೆದುಹಾಕುವ ದಿನದಲ್ಲಿ, 26 ಆ ದಿನದಲ್ಲಿ ತಪ್ಪಿಸಿಕೊಂಡವನು ನಿನ್ನ ಕಿವಿಗಳಿಗೆ ಸುದ್ದಿಯನ್ನು ತರುವ ಹಾಗೆ ನಿನ್ನ ಬಳಿಗೆ ಬರುವನಲ್ಲವೆ? 27 ಆ ದಿನದಲ್ಲಿ ತಪ್ಪಿಸಿಕೊಂಡವನ ಕಡೆಗೆ ನಿನ್ನ ಬಾಯಿ ತೆರೆದಿರುವುದು. ನೀನು ಇನ್ನು ಮೂಕನಾಗಿರದೆ ಮಾತನಾಡುವೆ ಮತ್ತು ಅವರಿಗೆ ಗುರುತಾಗಿರುವೆ, ಆಗ ನಾನೇ ಯೆಹೋವ ದೇವರೆಂದು ತಿಳಿಯುವರು.”