6
ಗಿದ್ಯೋನನು
ಇಸ್ರಾಯೇಲರು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು. ಆದ್ದರಿಂದ ಯೆಹೋವ ದೇವರು ಅವರನ್ನು ಏಳು ವರ್ಷ ಮಿದ್ಯಾನ್ಯರ ಕೈಗೆ ಒಪ್ಪಿಸಿಕೊಟ್ಟರು. ಮಿದ್ಯಾನ್ಯರ ಕೈ ಇಸ್ರಾಯೇಲಿಗೆ ವಿರೋಧವಾಗಿ ಬಲವಾದ್ದರಿಂದ ಇಸ್ರಾಯೇಲರು ಮಿದ್ಯಾನ್ಯರ ನಿಮಿತ್ತ ತಮಗೆ ಪರ್ವತಗಳಲ್ಲಿ ಇರುವ ಬಂಡೆಯ ಬಿರುಕುಗಳನ್ನೂ, ಗವಿಗಳನ್ನೂ, ಬಲವಾದ ಸ್ಥಾನಗಳನ್ನೂ ಮಾಡಿಕೊಂಡರು. ಇಸ್ರಾಯೇಲರು ಬೀಜ ಬಿತ್ತಿದ ತರುವಾಯ ಮಿದ್ಯಾನ್ಯರೂ, ಅಮಾಲೇಕ್ಯರೂ, ಪೂರ್ವದೇಶದ ಜನರೆಲ್ಲರೂ ಅವರಿಗೆ ವಿರೋಧವಾಗಿ ಬಂದು ದಂಡಿಳಿದು, ಗಾಜದ ಪ್ರದೇಶದ ಮಟ್ಟಿಗೂ ಭೂಮಿಯ ಫಲವನ್ನು ಕೆಡಿಸಿಬಿಟ್ಟು, ಇಸ್ರಾಯೇಲಿನಲ್ಲಿ ಆಹಾರವಾದರೂ ಕುರಿ, ದನ, ಕತ್ತೆಗಳಾದರೂ ಉಳಿಯಗೊಡಿಸಲಿಲ್ಲ. ಅವರು ತಮ್ಮ ಪಶುಗಳ ಡೇರೆಗಳ ಸಹಿತವಾಗಿ ಮಿಡತೆಗಳ ಹಾಗೆ ಗುಂಪಾಗಿ ಬಂದರು. ಅವರಿಗೂ, ಅವರ ಒಂಟೆಗಳಿಗೂ ಎಣಿಕೆ ಇರಲಿಲ್ಲ. ಅವರು ನಾಡನ್ನು ನಾಶಮಾಡುವುದಕ್ಕೆ ಬಂದರು. ಆದಕಾರಣ ಇಸ್ರಾಯೇಲರು ಮಿದ್ಯಾನ್ಯರಿಂದ ಬಹಳ ಬಡವರಾದರು. ಆಗ ಇಸ್ರಾಯೇಲರು ಯೆಹೋವ ದೇವರಿಗೆ ಬೇಡಿಕೊಂಡರು.
ಇಸ್ರಾಯೇಲರು ಮಿದ್ಯಾನ್ಯರ ನಿಮಿತ್ತ ಯೆಹೋವ ದೇವರನ್ನು ಬೇಡಿಕೊಂಡಾಗ, ಅವರು ಒಬ್ಬ ಪ್ರವಾದಿಯನ್ನು ಇಸ್ರಾಯೇಲರ ಬಳಿಗೆ ಕಳುಹಿಸಿದರು. ಅವನು ಅವರಿಗೆ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ, “ನೀವು ದಾಸತ್ವದಲ್ಲಿದ್ದ ನಿಮ್ಮನ್ನು ನಾನು ಈಜಿಪ್ಟಿನಿಂದ ಬರಮಾಡಿದೆನು. ನಿಮ್ಮನ್ನು ಈಜಿಪ್ಟಿನವರ ಕೈಯಿಂದ ತಪ್ಪಿಸಿ, ಅವರನ್ನು ನಿಮ್ಮ ಮುಂದೆ ಹೊರಗೆ ಹಾಕಿ, ಅವರ ದೇಶವನ್ನು ನಿಮಗೆ ಕೊಟ್ಟೆನು. 10 ‘ನಾನೇ ನಿಮ್ಮ ದೇವರಾದ ಯೆಹೋವ ದೇವರು. ನೀವು ವಾಸಿಸಿರುವ ಅಮೋರಿಯರ ದೇಶದ ದೇವರುಗಳಿಗೆ ಭಯಪಡಬೇಡಿರಿ,’ ಎಂದು ನಾನು ಹೇಳಿದೆನು. ಆದರೆ ನೀವು ನನ್ನ ಸ್ವರವನ್ನು ಕೇಳದೆ ಹೋದಿರಿ,” ಎಂದು ಹೇಳಿದನು.
11 ಯೆಹೋವ ದೇವರ ದೂತನು ಬಂದು ಅಬೀಯೆಜೆರನಾದ ಯೋವಾಷನಿಗೆ ಹೊಂದಿದ ಒಫ್ರದಲ್ಲಿರುವ ಏಲಾ ಮರದ ಕೆಳಗೆ ಕುಳಿತನು. ಆಗ ಯೋವಾಷನ ಮಗನಾದ ಗಿದ್ಯೋನನು ಮಿದ್ಯಾನ್ಯರಿಗೆ ಮರೆಯಾಗುವ ಹಾಗೆ ದ್ರಾಕ್ಷಿಯ ಆಲೆಯ ಬಳಿಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು. 12 ಆಗ ಯೆಹೋವ ದೇವರ ದೂತನು ಗಿದ್ಯೋನನಿಗೆ ಪ್ರತ್ಯಕ್ಷವಾಗಿ ಅವನಿಗೆ, “ಬಲಿಷ್ಠನಾದ ಪರಾಕ್ರಮಶಾಲಿಯೇ, ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ,” ಎಂದನು.
13 ಆಗ ಗಿದ್ಯೋನನು ಅವನಿಗೆ, “ಒಡೆಯನೇ, ಕ್ಷಮಿಸಿರಿ, ಯೆಹೋವ ದೇವರು ನಮ್ಮ ಸಂಗಡ ಇದ್ದರೆ, ಇದೆಲ್ಲಾ ನಮಗೆ ಏಕೆ ಸಂಭವಿಸಿತು? ಯೆಹೋವ ದೇವರು ನಮ್ಮನ್ನು ಈಜಿಪ್ಟಿನಿಂದ ಬರಮಾಡಲಿಲ್ಲವೋ? ಎಂದು ನಮ್ಮ ಪಿತೃಗಳು ನಮಗೆ ವಿವರಿಸಿ ಹೇಳಿದಂಥ ಅದ್ಭುತಗಳು ಎಲ್ಲಿ? ಈಗ ಯೆಹೋವ ದೇವರು ನಮ್ಮನ್ನು ಕೈಬಿಟ್ಟು, ಮಿದ್ಯಾನ್ಯರ ಕೈಗೆ ನಮ್ಮನ್ನು ಒಪ್ಪಿಸಿದ್ದಾರೆ,” ಎಂದನು.
14 ಯೆಹೋವ ದೇವರು ಅವನನ್ನು ದೃಷ್ಟಿಸಿ ನೋಡಿ, “ನಿನಗಿರುವ ಈ ಶಕ್ತಿಯಲ್ಲಿ ಹೋಗು, ನೀನು ಇಸ್ರಾಯೇಲನ್ನು ಮಿದ್ಯಾನ್ಯರ ಕೈಯಿಂದ ತಪ್ಪಿಸಿ ರಕ್ಷಿಸುವೆ; ನಾನು ನಿನ್ನನ್ನು ಕಳುಹಿಸಲಿಲ್ಲವೋ?” ಎಂದರು.
15 ಅದಕ್ಕವನು ಅವರಿಗೆ, “ನನ್ನ ಒಡೆಯನೇ, ಕ್ಷಮಿಸಿರಿ ನಾನು ಇಸ್ರಾಯೇಲನ್ನು ಹೇಗೆ ರಕ್ಷಿಸಲಿ? ಮನಸ್ಸೆಯಲ್ಲಿ ನನ್ನ ಕುಟುಂಬವು ಬಡತನದ್ದು. ನನ್ನ ತಂದೆಯ ಮನೆಯಲ್ಲಿ ನಾನು ಅಲ್ಪನು,” ಎಂದನು.
16 ಆದರೆ ಯೆಹೋವ ದೇವರು ಅವನಿಗೆ, “ನಾನು ನಿನ್ನ ಸಂಗಡ ಖಂಡಿತವಾಗಿ ಇರುವುದರಿಂದ ನೀನು ಮಿದ್ಯಾನ್ಯರನ್ನು ಒಬ್ಬ ಮನುಷ್ಯನೋ ಎಂಬಂತೆ ಹೊಡೆಯುವಿ,” ಎಂದರು.
17 ಅದಕ್ಕವನು, “ಈಗ ನಿಮ್ಮ ಸಮ್ಮುಖದಲ್ಲಿ ನನಗೆ ದಯೆ ದೊರಕಿದ್ದರೆ, ನನ್ನ ಸಂಗಡ ಮಾತನಾಡುವವರು ನೀವು ಎಂಬುದಕ್ಕೆ ನನಗೆ ಒಂದು ಗುರುತನ್ನು ತೋರಿಸಬೇಕು. 18 ನಾನು ನಿಮ್ಮ ಬಳಿಗೆ ನನ್ನ ಕಾಣಿಕೆಯನ್ನು ತಂದು, ನಿಮ್ಮ ಮುಂದೆ ಇಡುವವರೆಗೆ ನೀವು ಈ ಸ್ಥಳವನ್ನು ಬಿಟ್ಟುಹೋಗಬಾರದು,” ಎಂದು ಬೇಡಿಕೊಂಡನು.
ಅದಕ್ಕೆ ಯೆಹೋವ ದೇವರು, “ನೀನು ತಿರುಗಿ ಬರುವ ತನಕ ನಾನು ಕಾದಿರುವೆನು,” ಎಂದರು.
19 ಆಗ ಗಿದ್ಯೋನನು ಒಳಗೆ ಹೋಗಿ, ಒಂದು ಮೇಕೆಯ ಮರಿಯನ್ನೂ, ಹದಿನಾರು ಕಿಲೋಗ್ರಾಂ* 6:19 ಸುಮಾರು ಒಂದು ಎಫಾ ಹಿಟ್ಟಿನಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ಸಿದ್ಧಮಾಡಿ, ಮಾಂಸವನ್ನು ಪುಟ್ಟಿಯಲ್ಲಿ ಇಟ್ಟು, ರಸವನ್ನು ಪಾತ್ರೆಯಲ್ಲಿ ಹೊಯ್ದು, ಅದನ್ನು ಹೊರಗೆ ಏಲಾ ಮರದ ಕೆಳಗೆ ಇದ್ದ ಅವರ ಬಳಿಯಲ್ಲಿ ತಂದಿಟ್ಟನು.
20 ದೇವದೂತನು ಅವನಿಗೆ, “ನೀನು ಮಾಂಸವನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ತೆಗೆದುಕೊಂಡು ಈ ಬಂಡೆಯ ಮೇಲೆ ಇಟ್ಟು, ರಸವನ್ನು ಸುರಿ,” ಎಂದನು. ಅವನು ಹಾಗೆಯೇ ಮಾಡಿದನು. 21 ಆಗ ಯೆಹೋವ ದೇವರ ದೂತನು ತನ್ನ ಕೈಯಲ್ಲಿದ್ದ ಕೋಲಿನ ಕೊನೆಯನ್ನು ಚಾಚಿ, ಮಾಂಸವನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ಮುಟ್ಟಿದನು. ಆಗ ಬೆಂಕಿಯು ಬಂಡೆಯಿಂದ ಎದ್ದು, ಮಾಂಸವನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ದಹಿಸಿಬಿಟ್ಟಿತು. ಆಗ ಯೆಹೋವ ದೇವರ ದೂತನು ಅವನ ಕಣ್ಣುಗಳಿಗೆ ಕಾಣಿಸದೆ ಹೋದನು. 22 ಅವನು ಯೆಹೋವ ದೇವರ ದೂತನೆಂದು ಗಿದ್ಯೋನನು ತಿಳಿದಾಗ ಗಿದ್ಯೋನನು, “ಸಾರ್ವಭೌಮ ಯೆಹೋವ ದೇವರೇ, ನಾನು ಯೆಹೋವ ದೇವರ ದೂತನನ್ನು ಮುಖಾಮುಖಿಯಾಗಿ ಕಂಡೆನು,” ಎಂದನು.
23 ಆದರೆ ಯೆಹೋವ ದೇವರು ಅವನಿಗೆ, “ನಿನಗೆ ಸಮಾಧಾನವಾಗಲಿ; ಭಯಪಡಬೇಡ, ನೀನು ಸಾಯುವುದಿಲ್ಲ,” ಎಂದರು.
24 ಗಿದ್ಯೋನನು ಯೆಹೋವ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿ, “ಯೆಹೋವ ಶಾಲೋಮ್” 6:24 ಹೀಬ್ರೂ ಭಾಷೆಯಲ್ಲಿ ಯೆಹೋವ ಶಾಲೋಮ್ ಅಂದರೆ ಯೆಹೋವ ದೇವರು ಸಮಾಧಾನಪ್ರದರು ಎಂದು ಅರ್ಥ ಎಂದು ಅದಕ್ಕೆ ಹೆಸರಿಟ್ಟನು. ಅದು ಈವರೆಗೂ ಅಬೀಯೆಜೆರ್ ಒಫ್ರದಲ್ಲಿ ಇನ್ನೂ ಇದೆ.
25 ಅದೇ ರಾತ್ರಿಯಲ್ಲಿ ಯೆಹೋವ ದೇವರು ಅವನಿಗೆ, “ನೀನು ನಿನ್ನ ತಂದೆಗಿರುವ ಎತ್ತುಗಳಲ್ಲಿ ಎಳೆಯದಾದ ಏಳು ವರ್ಷದ ಎರಡನೆಯ ಹೋರಿಯನ್ನು ತೆಗೆದುಕೊಂಡುಹೋಗಿ, ನಿನ್ನ ತಂದೆಗೆ ಇರುವ ಬಾಳನ ಬಲಿಪೀಠವನ್ನು ಕೆಡವಿ, ಅದರ ಸಮೀಪದಲ್ಲಿರುವ ಅಶೇರವೆಂಬ ವಿಗ್ರಹಸ್ತಂಭಗಳನ್ನು 6:25 ಅಶೇರಾ ದೇವಿಯ ಮರದ ಚಿಹ್ನೆ ಕಡಿದುಹಾಕಿ, 26 ಈ ಪರ್ವತದ ತುದಿಯಲ್ಲಿ ನೇಮಕವಾದ ಸ್ಥಳದಲ್ಲಿ ನಿನ್ನ ದೇವರಾದ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಆ ಎರಡನೆಯ ಹೋರಿಯನ್ನು ತಂದು, ನೀನು ಕಡಿದುಹಾಕಿದ ಅಶೇರ ಸ್ತಂಭವನ್ನು ಕಟ್ಟಿಗೆಗಳ ಮೇಲೆ ದಹನಬಲಿಯಾಗಿ ಅರ್ಪಿಸು,” ಎಂದರು.
27 ಆಗ ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ತೆಗೆದುಕೊಂಡು, ಯೆಹೋವ ದೇವರು ತನಗೆ ಹೇಳಿದ ಹಾಗೆಯೇ ಮಾಡಿದನು. ಆದರೆ ಅವನು ತನ್ನ ತಂದೆಯ ಮನೆಯವರೆಗೂ, ಆ ಊರಿನ ಮನುಷ್ಯರಿಗೂ ಭಯಪಟ್ಟದ್ದರಿಂದ ಹಗಲಲ್ಲಿ ಮಾಡದೆ ರಾತ್ರಿಯಲ್ಲಿ ಮಾಡಿದನು.
28 ಆ ಊರಿನ ಮನುಷ್ಯರು ಬೆಳಿಗ್ಗೆ ಎದ್ದಾಗ, ಬಾಳನ ಬಲಿಪೀಠವು ಕೆಡವಲಾಗಿದ್ದನ್ನು ಮತ್ತು ಅದರ ಪಕ್ಕದಲ್ಲಿದ್ದ ಅಶೇರ ಸ್ತಂಭವನ್ನು ಕಡಿಯಲಾಗಿರುವುದನ್ನು ಕಂಡರು. ಹೊಸದಾಗಿ ಕಟ್ಟಿದ ಬಲಿಪೀಠದ ಮೇಲೆ ಆ ಎರಡನೆಯ ಹೋರಿಯ ಬಲಿ ಅರ್ಪಿಸಲಾಗಿತ್ತು.
29 ಆಗ ಅವರು ಒಬ್ಬರಿಗೊಬ್ಬರು, “ಈ ಕಾರ್ಯವನ್ನು ಮಾಡಿದವನ್ಯಾರು?” ಎಂದರು.
ವಿಚಾರಿಸಿ ಕೇಳಿದಾಗ, ಅವರು, “ಯೋವಾಷನ ಮಗ ಗಿದ್ಯೋನನು ಈ ಕಾರ್ಯ ಮಾಡಿದನು,” ಎಂದರು.
30 ಆ ಊರಿನವರು ಯೋವಾಷನಿಗೆ, “ನಿನ್ನ ಮಗನನ್ನು ಹೊರಗೆ ತೆಗೆದುಕೊಂಡು ಬಾ, ಅವನು ಸಾಯಬೇಕು. ಏಕೆಂದರೆ ಬಾಳನ ಬಲಿಪೀಠವನ್ನು ಕೆಡವಿ, ಅದರ ಬಳಿಯಲ್ಲಿದ್ದ ಅಶೇರ ಸ್ತಂಭವನ್ನು ಕಡಿದುಹಾಕಿದನು,” ಎಂದರು.
31 ಆದರೆ ಯೋವಾಷನು ತನಗೆ ವಿರೋಧವಾಗಿ ನಿಂತಿದ್ದ ಸಮಸ್ತರಿಗೂ, “ನೀವು ಬಾಳನಿಗಾಗಿ ವ್ಯಾಜ್ಯವಾಡುವಿರೋ? ನೀವು ಅವನನ್ನು ರಕ್ಷಿಸುವಿರೋ? ಅವನಿಗಾಗಿ ವ್ಯಾಜ್ಯ ಮಾಡುವವನು ಈ ಉದಯಕಾಲದಲ್ಲೇ ಹತನಾಗಲಿ. ಅವನು ದೇವರಾದರೆ ತನ್ನ ಬಲಿಪೀಠವನ್ನು ಕೆಡವಿದ್ದರಿಂದ, ಅವನು ತನ್ನನ್ನು ರಕ್ಷಿಸಿಕೊಳ್ಳಲಿ” ಎಂದನು. 32 ಗಿದ್ಯೋನನು ಬಾಳನ ಬಲಿಪೀಠವನ್ನು ಕೆಡವಿದ ಕಾರಣ ಅವರು ಆ ದಿವಸದಲ್ಲಿ, “ಬಾಳನೇ ವ್ಯಾಜ್ಯವಾಡಲಿ” ಎಂದು ಹೇಳಿದ್ದರಿಂದ ಗಿದ್ಯೋನನಿಗೆ ಯೆರುಬ್ಬಾಳ ಎಂಬ ಹೆಸರಾಯಿತು.
33 ಮಿದ್ಯಾನ್ಯರೂ, ಅಮಾಲೇಕ್ಯರೂ, ಪೂರ್ವದೇಶದ ಜನರೆಲ್ಲರೂ ಒಟ್ಟಾಗಿ ಕೂಡಿ, ಯೊರ್ದನ್ ಹೊಳೆ ದಾಟಿ ಬಂದು, ಇಜ್ರೆಯೇಲ್ ತಗ್ಗಿನಲ್ಲಿ ಪಾಳೆಯಮಾಡಿಕೊಂಡರು. 34 ಆದರೆ ಯೆಹೋವ ದೇವರ ಆತ್ಮರು ಗಿದ್ಯೋನನ ಮೇಲೆ ಬಂದರು. ಅವನು ತುತೂರಿಯನ್ನು ಊದಿದಾಗ, ಅಬೀಯೆಜೆರಿನವರು ಅವನ ಹಿಂದೆ ಕೂಡಿಬಂದರು. 35 ಮನಸ್ಸೆಯವರ ಬಳಿ ದೂತರನ್ನು ಕಳುಹಿಸಿದಾಗ, ಅವರು ಅವನ ಹಿಂದೆ ಕೂಡಿಬಂದರು. ಆಶೇರ್, ಜೆಬುಲೂನಿನಲ್ಲಿಯೂ, ನಫ್ತಾಲಿನಲ್ಲಿಯೂ ದೂತರನ್ನು ಕಳುಹಿಸಲು, ಅವರು ಇವರಿಗೆ ಭೇಟಿಯಾಗಲು ಬಂದರು.
36 ಗಿದ್ಯೋನನು ದೇವರಿಗೆ, “ನೀವು ಹೇಳಿದ ಹಾಗೆಯೇ ನನ್ನ ಕೈಯಿಂದ ಇಸ್ರಾಯೇಲನನ್ನು ರಕ್ಷಿಸುವಿರಿಯಾದರೆ, 37 ಇಗೋ, ಉಣ್ಣೆಯ ತುಪ್ಪಟವನ್ನು ಕಣದಲ್ಲಿ ಹಾಕುವೆನು. ಮಂಜು ಉಣ್ಣೆಯ ಮೇಲೆ ಮಾತ್ರವೇ ಇದ್ದು ಭೂಮಿಯೆಲ್ಲಾ ಒಣಗಿದ್ದರೆ, ಆಗ ನೀವು ಹೇಳಿದ ಹಾಗೆ ಇಸ್ರಾಯೇಲನ್ನು ನನ್ನ ಕೈಯಿಂದ ನೀವು ರಕ್ಷಿಸುವಿರಿ ಎಂಬುದನ್ನು ನಾನು ತಿಳಿಯುವೆನು,” ಎಂದನು. 38 ಅದು ಹಾಗೆಯೇ ಆಯಿತು. ಅವನು ಮರುದಿವಸ ಉದಯದಲ್ಲಿ ಎದ್ದು, ಉಣ್ಣೆಯ ತುಪ್ಪಟವನ್ನು ತೆಗೆದುಕೊಂಡು, ಅದರೊಳಗಿದ್ದ ಮಂಜಿನ ನೀರನ್ನು ಒಂದು ಬೋಗುಣಿಯ ತುಂಬಾ ಹಿಂಡಿದನು.
39 ಗಿದ್ಯೋನನು ದೇವರಿಗೆ, “ನಾನು ಇನ್ನೊಂದು ಸಾರಿ ಮಾತನಾಡುವುದರಿಂದ ನಿಮ್ಮ ಕೋಪವು ನನ್ನ ಮೇಲೆ ಉರಿಯಬಾರದು. ಉಣ್ಣೆಯ ತುಪ್ಪಟದಿಂದ ಇನ್ನೊಂದು ಸಾರಿ ನಾನು ನಿಮ್ಮನ್ನು ಶೋಧಿಸುವೆನು. ತುಪ್ಪಟ ಮಾತ್ರವೇ ಒಣಗುವ ಹಾಗೆಯೂ ಭೂಮಿಯಲ್ಲೆಲ್ಲಾ ಮಂಜು ಇರುವ ಹಾಗೆಯೂ ಅಪ್ಪಣೆ ಆಗಲಿ,” ಎಂದನು. 40 ಆ ರಾತ್ರಿ ದೇವರು ಹಾಗೆಯೇ ಮಾಡಿದರು. ತುಪ್ಪಟ ಮಾತ್ರ ಒಣಗಿತ್ತು, ನೆಲದ ಮೇಲೆಲ್ಲಾ ಹನಿಬಿದ್ದಿತ್ತು.

*6:19 6:19 ಸುಮಾರು ಒಂದು ಎಫಾ

6:24 6:24 ಹೀಬ್ರೂ ಭಾಷೆಯಲ್ಲಿ ಯೆಹೋವ ಶಾಲೋಮ್ ಅಂದರೆ ಯೆಹೋವ ದೇವರು ಸಮಾಧಾನಪ್ರದರು ಎಂದು ಅರ್ಥ

6:25 6:25 ಅಶೇರಾ ದೇವಿಯ ಮರದ ಚಿಹ್ನೆ