37
“ಇದನ್ನು ನೋಡಿದಾಗ ನನ್ನ ಹೃದಯವು ನಡುಗಿ,
ಅದರ ಸ್ಥಳದಿಂದ ಜಿಗಿಯುವಂತಾಗುತ್ತದೆ.
ದೇವರ ಧ್ವನಿಯ ಘರ್ಜನೆಯನ್ನು ಕೇಳಿರಿ.
ದೇವರ ಬಾಯಿಂದ ಹೊರಡುವ ಮಾತನ್ನು ಲಕ್ಷ್ಯಕೊಟ್ಟು ಆಲಿಸಿರಿ.
ತಮ್ಮ ಮಿಂಚನ್ನು ದೇವರು ಆಕಾಶಮಂಡಲದಲ್ಲಿ ಹರಡುತ್ತಾರೆ;
ಅದನ್ನು ಭೂಮಿಯ ಅಂಚುಗಳವರೆಗೆ ಕಳುಹಿಸುತ್ತಾರೆ.
ಮಿಂಚಿನ ತರುವಾಯ ಘರ್ಜನೆಯ ಶಬ್ದ ಕೇಳಿಬರುವುದು;
ದೇವರು ಮಹತ್ತಿನ ಶಬ್ದದಿಂದ ಗುಡುಗುತ್ತಾರೆ;
ದೇವರ ಸ್ವರ ಕೇಳುವಾಗ
ಅದನ್ನು ತಡೆಯಲಾಗದು.
ದೇವರು ತಮ್ಮ ಸ್ವರದಿಂದ ಅದ್ಭುತಕಾರ್ಯಗಳನ್ನು ಗುಡುಗುತ್ತಾರೆ;
ನಾವು ಗ್ರಹಿಸಲಾಗದ ಮಹಾತ್ಕಾರ್ಯಗಳನ್ನು ದೇವರು ಮಾಡುತ್ತಾರೆ.
ದೇವರು ಹಿಮಕ್ಕೆ, ‘ಹದವಾಗಿ ಭೂಮಿಗೆ ಬೀಳು’ ಎಂದು ಹೇಳುತ್ತಾರೆ.
ಮಳೆಗೆ, ‘ಭೂಮಿಯ ಮೇಲೆ ರಭಸದಿಂದ ಸುರಿ’ ಎಂದು ಆಜ್ಞಾಪಿಸುತ್ತಾರೆ.
ಹೀಗೆ ದೇವರು ತಮ್ಮ ಕೃತ್ಯವನ್ನು ಜನರೆಲ್ಲರೂ ತಿಳುಕೊಳ್ಳುವಂತೆ ಮಾಡುತ್ತಾರೆ.
ಸ್ವಲ್ಪಕಾಲ ಮನುಷ್ಯರ ದುಡಿಮೆಯನ್ನು ನಿಲ್ಲಿಸುತ್ತಾರೆ.
ಆಗ ಮೃಗಗಳು ಅಡಗುವ ಸ್ಥಳಕ್ಕೆ ಹೋಗುತ್ತವೆ,
ತಮ್ಮ ಗುಹೆಗಳಲ್ಲಿ ಉಳಿಯುತ್ತವೆ.
ದಕ್ಷಿಣದಿಕ್ಕಿನಿಂದ ಬಿರುಗಾಳಿಯು ಬೀಸುತ್ತದೆ.
ಉತ್ತರದಿಂದ ಚಳಿಯೂ ಬರುತ್ತದೆ.
10 ದೇವರ ಶ್ವಾಸದಿಂದ ನೀರು ಮಂಜುಗಡ್ಡೆ ಆಗುವುದು;
ವಿಶಾಲ ಸಮುದ್ರದ ನೀರು ಗಟ್ಟಿಯಾಗುವುದು.
11 ಮೋಡವನ್ನು ತೇವಾಂಶದಿಂದ ಭಾರಮಾಡುತ್ತಾರೆ;
ಮೇಘಮಂಡಲವು ದೇವರ ಮಿಂಚನ್ನು ಚದರಿಸುತ್ತದೆ.
12 ಭೂಲೋಕದಲ್ಲೆಲ್ಲಾ ಸಿಡಿಲುಗಳಿಗೆ
ದೇವರು ಆಜ್ಞಾಪಿಸಲು,
ಎಲ್ಲಾ ಕೆಲಸವನ್ನು ಮಾಡುವಂತೆ ಅವು ತಿರುಗುತ್ತವೆ.
13 ಜನರ ಶಿಕ್ಷಣಕ್ಕಾಗಿಯೂ, ಭೂಮಿಯ ಹಿತಕ್ಕಾಗಿಯೂ ದೇವರು ತಮ್ಮ ಪ್ರೀತಿಯನ್ನು ತೋರಿಸಲು,
ಮೇಘಗಳನ್ನು ಬರಮಾಡುತ್ತಾರೆ.
 
14 “ಆದ್ದರಿಂದ ಯೋಬನೇ, ಇದಕ್ಕೆ ಕಿವಿಗೊಡು;
ಮೌನವಾಗಿ ನಿಂತು ದೇವರ ಅದ್ಭುತಗಳನ್ನು ಧ್ಯಾನಿಸು.
15 ದೇವರು ಮೋಡಗಳಿಗೆ ಅಪ್ಪಣೆ ಕೊಡುವುದನ್ನು ಅರಿತಿರುವೆಯಾ?
ದೇವರ ಮೇಘದ ಸಿಡಿಲು ಹೊಳೆಯುವುದನ್ನೂ ನೀನು ತಿಳಿದಿರುವೆಯಾ?
16 ಮೋಡಗಳ ತೂಗಾಟವನ್ನು ಬಲ್ಲೆಯಾ?
ಜ್ಞಾನಪೂರ್ಣರಾದ ದೇವರ ಅದ್ಭುತಗಳನ್ನೂ ತಿಳಿದುಕೊಂಡಿರುವೆಯಾ?
17 ಭೂಮಿಯು ದಕ್ಷಿಣ ಗಾಳಿಯಿಂದ ಸ್ತಬ್ಧವಾಗಿರುವಾಗ,
ನಿನ್ನ ವಸ್ತ್ರ ಹೇಗೆ ಬಿಸಿಯಾಗಿರುತ್ತವೆ?
18 ಎರಕ ಹೊಯ್ದ ಬಲವಾಗಿರುವ ಕನ್ನಡಿಯ ಹಾಗೆ,
ನೀನು ದೇವರ ಸಂಗಡ ಸೇರಿಕೊಂಡು ಆಕಾಶಮಂಡಲವನ್ನು ವಿಸ್ತರಿಸಬಲ್ಲೆಯಾ?
 
19 “ನಾವು ದೇವರಿಗೆ ಏನು ಹೇಳಬೇಕೆಂದು ನಮಗೆ ತಿಳಿಸು;
ನಮ್ಮ ಅಂಧಕಾರದಿಂದ ನಾವು ಏನೂ ವಾದಿಸಲು ಸಾಧ್ಯವಿಲ್ಲ.
20 ನಾನು ಮಾತನಾಡಬೇಕೆಂದು ದೇವರಿಗೆ ಹೇಳಿಕಳುಹಿಸಬೇಕೆ?
ಹಾಗೆ ಮನುಷ್ಯನು ಮಾತನಾಡಿದರೆ, ನಿಜವಾಗಿಯೂ ಬದುಕಿರಲು ಸಾಧ್ಯವೇ?
21 ಗಾಳಿ ಬೀಸಿ ಆಕಾಶ ಶುಭ್ರವಾದಾಗ,
ಪ್ರಜ್ವಲಿಸುವ ಸೂರ್ಯನನ್ನು ದೃಷ್ಟಿಸಲಾಗದು
ಹೌದು, ಯಾರೂ ದಿಟ್ಟಿಸಿ ನೋಡಲಾರರು.
22 ಉತ್ತರದಿಂದ ಹೊನ್ನಿನ ಹೊಳಪು ಬರುತ್ತದೆ;
ಅದರಂತೆಯೇ ದೇವರ ವಿಸ್ಮಯ ತೇಜಸ್ಸಿನಿಂದ ಬರುತ್ತಾರೆ.
23 ಇಂಥಾ ಸರ್ವಶಕ್ತರನ್ನು ನಾವು ಕಂಡುಹಿಡಿಯಲಾಗದು; ದೇವರು ಶಕ್ತಿಯಲ್ಲಿ ಉನ್ನತರಾಗಿದ್ದಾರೆ;
ನ್ಯಾಯತೀರ್ಪಿನಲ್ಲಿಯೂ, ಮಹಾ ನೀತಿಯಲ್ಲಿಯೂ ದೇವರು ದಬ್ಬಾಳಿಕೆ ನಡೆಸುವವರಲ್ಲ.
24 ಆದ್ದರಿಂದ ಮನುಷ್ಯರು ದೇವರಿಗೆ ಭಯಪಡುತ್ತಾರೆ;
ಆದರೆ ತಾವೇ ಜ್ಞಾನಿಗಳೆಂದು ತಿಳಿದಿರುವವರು ದೇವರು ಲಕ್ಷಿಸುವುದಿಲ್ಲ.”