17
ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗ ದೊರೆಯಿತು. ಏಕೆಂದರೆ ಅವನು ಯೋಸೇಫನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದುದರಿಂದ ಗಿಲ್ಯಾದ್, ಬಾಷಾನ್ ಎಂಬ ಪ್ರಾಂತ್ಯಗಳು ಅವನ ಪಾಲಿಗೆ ಬಂದವು. ಮನಸ್ಸೆಯ ಉಳಿದವರಿಗೆ ಅಬೀಯೆಜೆರನ ಮಕ್ಕಳಿಗೂ ಹೇಲೆಕ್‌ನ ಮಕ್ಕಳಿಗೂ ಅಸ್ರೀಯೇಲನ ಮಕ್ಕಳಿಗೂ ಶೆಕೆಮ್ ಮಕ್ಕಳಿಗೂ ಹೇಫೆರನ ಮಕ್ಕಳಿಗೂ ಶೆಮೀದಾನನ ಮಕ್ಕಳಿಗೂ ಅವರ ಕುಟುಂಬಗಳಿಗೆ ತಕ್ಕ ಸೊತ್ತು ದೊರೆಯಿತು. ಇವರು ತಮ್ಮ ಕುಟುಂಬಗಳ ಪ್ರಕಾರ ಯೋಸೇಫನ ಮಗನಾದ ಮನಸ್ಸೆಯ ಗಂಡು ಮಕ್ಕಳಾಗಿದ್ದವರು.
ಆದರೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ, ಗಿಲ್ಯಾದನ ಮೊಮ್ಮಗನೂ, ಹೇಫೆರನ ಮಗನೂ ಆದ ಚಲ್ಪಹಾದನಿಗೆ ಪುತ್ರರಿರಲಿಲ್ಲ. ಆದರೆ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬ ಹೆಸರುಳ್ಳ ಪುತ್ರಿಯರು ಇದ್ದರು. ಇವರು ಯಾಜಕನಾದ ಎಲಿಯಾಜರನ ಬಳಿಗೂ ನೂನನ ಮಗ ಯೆಹೋಶುವನ ಬಳಿಗೂ ಪ್ರಧಾನರುಗಳ ಬಳಿಗೂ ಬಂದು ಅವರಿಗೆ, “ನಮ್ಮ ಸಹೋದರರಲ್ಲಿ ನಮಗೂ ಸೊತ್ತನ್ನು ಕೊಡುವಂತೆ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ್ದರು,” ಎಂದರು. ಆದ್ದರಿಂದ ಅವರ ತಂದೆಗಳ ಸಹೋದರರ ಜೊತೆಗೆ ಅವರಿಗೂ ಯೆಹೋವ ದೇವರ ವಾಕ್ಯದ ಪ್ರಕಾರ ಸೊತ್ತನ್ನು ಕೊಟ್ಟನು. ಯೊರ್ದನ್ ನದಿ ಆಚೆಯಲ್ಲಿರುವ ಗಿಲ್ಯಾದ್, ಬಾಷಾನ್ ಎಂಬ ಪ್ರಾಂತ್ಯಗಳ ಜೊತೆಗೆ ಮನಸ್ಸೆಗೆ ಬಿದ್ದ ಚೀಟಿನಲ್ಲಿ ಈಚೆಯಲ್ಲಿಯೂ ಹತ್ತು ಪಾಲು ಸಿಕ್ಕಿದವು. ಏಕೆಂದರೆ ಮನಸ್ಸೆಯ ಪುತ್ರಿಯರು ಸಹ ಅವನ ಪುತ್ರರಲ್ಲಿ ಸೊತ್ತನ್ನು ಹೊಂದಿದ್ದರು. ಆದರೆ ಉಳಿದ ಮನಸ್ಸೆಯ ಪುತ್ರರಿಗೆ ಗಿಲ್ಯಾದ್ ನಾಡು ದೊರೆಯಿತು.
 
ಮನಸ್ಸೆಯ ಮೇರೆ, ಆಶೇರಿನಿಂದ ಶೆಕೆಮಿನ ಮುಂದಿರುವ ಮಿಕ್ಮೆತಾತಿನವರೆಗೂ ಇತ್ತು. ಅಲ್ಲಿಂದ ದಕ್ಷಿಣ ಕಡೆಯಿರುವ ಎನ್ ತಪ್ಪೂಹದ ನಿವಾಸಗಳಿಗೆ ಹೋಗುತ್ತದೆ. ತಪ್ಪೂಹದ ಭೂಮಿ ಮನಸ್ಸೆಯದಾಗಿತ್ತು. ಆದರೆ ಮನಸ್ಸೆಯ ಮೇರೆಯಲ್ಲಿರುವ ತಪ್ಪೂಹ ಎಫ್ರಾಯೀಮನ ಮಕ್ಕಳದ್ದಾಗಿತ್ತು. ಮೇರೆ ಕಾನಾ ನದಿಯ ದಕ್ಷಿಣಕ್ಕೆ ನದಿಯವರೆಗೂ ಇಳಿದುಹೋಗುವುದು. ಅಲ್ಲಿರುವ ಮನಸ್ಸೆಯ ಪಟ್ಟಣಗಳಲ್ಲಿ ಕೆಲವು ಪಟ್ಟಣಗಳು ಎಫ್ರಾಯೀಮನದಾಗಿದ್ದವು. ಮನಸ್ಸೆಯ ಮೇರೆಯು ನದಿಯ ಉತ್ತರಕ್ಕಿರುವ ಮೆಡಿಟೆರೆನಿಯನ್ ಸಮುದ್ರದವರೆಗೂ ಹೋಗಿರುವುದು. 10 ನದಿಯ ದಕ್ಷಿಣ ಸೀಮೆ ಎಫ್ರಾಯೀಮನದು; ಉತ್ತರ ಸೀಮೆ ಮನಸ್ಸೆಯದು, ಮೆಡಿಟೆರೆನಿಯನ್ ಸಮುದ್ರವು ಅದರ ಮೇರೆಯಾಗಿರುವುದು. ಉತ್ತರಕ್ಕೆ ಇರುವ ಆಶೇರ್ ಗೋತ್ರದವರ ಪ್ರಾಂತವೂ ಪೂರ್ವಕ್ಕೆ ಇರುವ ಇಸ್ಸಾಕಾರ್ ಗೋತ್ರವೂ ಇರುವುದು.
11 ಇಸ್ಸಾಕಾರನ ಮಧ್ಯದಲ್ಲಿಯೂ ಆಶೇರನ ಮಧ್ಯದಲ್ಲಿಯೂ ಇರುವ ಸೀಮೆಗಳಾದ ಬೇತ್ ಷೆಯಾನ, ಅದರ ಗ್ರಾಮಗಳೂ ಇಬ್ಲೆಯಾಮ್ ಅದರ ಗ್ರಾಮಗಳೂ ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಎಂದೋರ್, ತಾನಕ್, ಮೆಗಿದ್ದೋ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ಮನಸ್ಸೆಗೆ ಸೇರಿದವು. ಮೂರನೆಯ ಊರು ನಾಫೋತ್ ಆಗಿರುತ್ತದೆ.
 
12 ಆದರೆ ಮನಸ್ಸೆಯ ಸಂತತಿಯರಿಗೆ ಆ ಪಟ್ಟಣಗಳ ನಿವಾಸಿಗಳಾದ ಕಾನಾನ್ಯರನ್ನು ಹೊರಡಿಸುವುದಕ್ಕಾಗದೆ ಹೋಯಿತು. ಕಾನಾನ್ಯರು ಆ ಸೀಮೆಯಲ್ಲೇ ವಾಸವಾಗಿರಲು ನಿರ್ಧರಿಸಿದ್ದರು. 13 ಆದರೆ ಇಸ್ರಾಯೇಲರು ಬಲಗೊಂಡಾಗ, ಕಾನಾನ್ಯರನ್ನು ಹೊರಡಿಸದೆ ಅವರನ್ನು ಜೀತದಾಳುಗಳನ್ನಾಗಿ ಮಾಡಿಕೊಂಡರು.
14 ಯೋಸೇಫನ ಸಂತತಿಯರು ಯೆಹೋಶುವನಿಗೆ, “ಯೆಹೋವ ದೇವರು ನಮ್ಮನ್ನು ಈವರೆಗೂ ಆಶೀರ್ವದಿಸುತ್ತಾ ಬಂದದ್ದರಿಂದ, ನಾವು ಮಹಾ ಜನಾಂಗವಾಗಿದ್ದೇವೆ. ಹೀಗಿರುವಾಗ ನೀವು ನಮಗೆ ಸೊತ್ತಾಗಿ ಒಂದೇ ಒಂದು ಭಾಗವನ್ನು ಮಾತ್ರ ಪಾಲನ್ನಾಗಿ ಕೊಟ್ಟಿದ್ದು ಏಕೆ?” ಎಂದು ಕೇಳಿದರು.
15 ಅದಕ್ಕೆ ಯೆಹೋಶುವನು ಉತ್ತರವಾಗಿ ಅವರಿಗೆ, “ನೀವು ಹೆಚ್ಚು ಜನರಾಗಿದ್ದರೆ ಮತ್ತು ನಿಮಗೆ ಎಫ್ರಾಯೀಮ್ ಪರ್ವತವು ಸಾಲದಿದ್ದರೆ, ನೀವು ಪೆರಿಜೀಯರ ಮತ್ತು ರೆಫಾಯರ ನಾಡುಗಳಿಗೆ ಹೋಗಿ ಅಲ್ಲಿನ ಕಾಡನ್ನು ಕಡಿದು ನಿಮಗೆ ಸ್ಥಳಮಾಡಿಕೊಳ್ಳಿರಿ,” ಎಂದನು.
16 ಅದಕ್ಕೆ ಯೋಸೇಫನ ಸಂತತಿಯರು, “ಆ ಪರ್ವತವು ನಮಗೆ ಸಾಲದು. ಇದಲ್ಲದೆ ತಗ್ಗಿನ ಸೀಮೆಯಲ್ಲಿರುವ ಬೇತ್ ಷೆಯಾನ್‌ನಲ್ಲಿಯೂ ಇಜ್ರೆಯೇಲ್ ಕಣಿವೆಯಲ್ಲಿಯೂ ವಾಸಿಸಿರುವ ಸಮಸ್ತ ಕಾನಾನ್ಯರ ಬಳಿಯಲ್ಲಿ ಕಬ್ಬಿಣದ ರಥಗಳು ಇವೆ,” ಎಂದರು.
17 ಆಗ ಯೆಹೋಶುವನು ಯೋಸೇಫನ ಮಕ್ಕಳಾದ ಎಫ್ರಾಯೀಮನಿಗೂ ಮನಸ್ಸೆಗೂ, “ನೀವು ಮಹಾಜನಾಂಗವೂ ಬಹು ಬಲವುಳ್ಳವರೂ ಆಗಿರುವಿರಿ. ಒಂದೇ ಭಾಗ ನಿಮಗೆ ಇರಬಾರದು. ಆದರೆ ಪರ್ವತವು ನಿಮ್ಮದಾಗಿರುವುದು. 18 ಏಕೆಂದರೆ ಅದು ಅಡವಿಯಾಗಿದೆ. ಅದನ್ನು ನೀವು ಕಡಿಯಬೇಕು. ಅದರ ಅಂತ್ಯಗಳವರೆಗೂ ನಿಮ್ಮದಾಗಿರುವುದು. ಕಬ್ಬಿಣದ ರಥಗಳಿದ್ದರೂ ಅವರು ಬಲಿಷ್ಠರಾಗಿದ್ದರೂ ನೀವು ಅವರನ್ನು ಹೊರಡಿಸಿಬಿಡಲು ನಿಮಗೆ ಸಾಧ್ಯ,” ಎಂದನು.