ಕೀರ್ತನೆ 4
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ತಂತಿವಾದ್ಯದೊಡನೆ ಹಾಡತಕ್ಕದ್ದು. ದಾವೀದನ ಕೀರ್ತನೆ.
1 ನನ್ನ ನೀತಿಯಾಗಿರುವ ದೇವರೇ,
ನಾನು ಕರೆಯುವಾಗ ನನಗೆ ಸದುತ್ತರವನ್ನು ಕೊಡಿರಿ.
ನನ್ನ ಸಂಕಟದಿಂದ ನನಗೆ ನೆಮ್ಮದಿಯನ್ನು ನೀಡಿರಿ;
ನನ್ನನ್ನು ಕರುಣಿಸಿ, ನನ್ನ ಪ್ರಾರ್ಥನೆಯನ್ನು ಕೇಳಿರಿ.
2 ಓ ಮಾನವ, ನೀನು ಎಲ್ಲಿಯತನಕ ನನ್ನ ಮಹಿಮೆಯನ್ನು ಅವಮಾನಕ್ಕೆ ಗುರಿಪಡಿಸುವಿ?
ನೀನು ಎಲ್ಲಿಯತನಕ ವ್ಯರ್ಥವಾದದ್ದನ್ನು ಪ್ರೀತಿಸಿ, ಸುಳ್ಳನ್ನು* 4:2 ಅಥವಾ, ಸುಳ್ಳು ದೇವರನ್ನು ಹುಡುಕುವಿ?
3 ಯೆಹೋವ ದೇವರು ತಮ್ಮ ನಂಬಿಗಸ್ತರನ್ನು
ತಮಗಾಗಿ ಪ್ರತ್ಯೇಕಿಸಿದ್ದಾರೆ ಎಂದು ತಿಳಿದುಕೊಳ್ಳಿರಿ;
ನಾನು ಬೇಡಿಕೊಳ್ಳಲು ಯೆಹೋವ ದೇವರು ನನಗೆ ಉತ್ತರ ನೀಡುವರು.
4 ನಡುಗಿರಿ,† 4:4 ನಡುಗಿರಿ ಹೀಬ್ರೂ ಭಾಷೆಯಲ್ಲಿ ಕೋಪಗೊಂಡರೂ ಪಾಪಮಾಡಬೇಡಿರಿ;
ನೀವು ನಿಮ್ಮ ಹಾಸಿಗೆಯ ಮೇಲೆ ಇರುವಾಗ,
ನಿಮ್ಮ ಹೃದಯಗಳಲ್ಲಿ ಧ್ಯಾನಮಾಡಿ ಮೌನವಾಗಿರಿ.
5 ನೀತಿಯ ಬಲಿಗಳನ್ನು ಅರ್ಪಿಸಿರಿ
ಯೆಹೋವ ದೇವರಲ್ಲಿ ನಿಮ್ಮ ಭರವಸೆಯನ್ನು ಇಡಿರಿ.
6 ಯೆಹೋವ ದೇವರೇ, “ನಮಗೆ ಒಳ್ಳೆಯದನ್ನು ಮಾಡುವವರು ಯಾರು?”
ಎಂದು ಕೇಳುವವರು ಅನೇಕರಿದ್ದಾರೆ.
ನಿಮ್ಮ ಮುಖಪ್ರಕಾಶವು ನಮ್ಮ ಮೇಲೆ ಬೆಳಗಲಿ.
7 ಧಾನ್ಯವೂ ಹೊಸ ದ್ರಾಕ್ಷಾರಸವೂ ಸುಗ್ಗಿಕಾಲದಲ್ಲಿ
ಸಮೃದ್ಧಿಯಾದಾಗ ಇರುವುದಕ್ಕಿಂತಲೂ ಅಧಿಕವಾದ
ಆನಂದವನ್ನು ನೀವು ನನ್ನ ಹೃದಯದಲ್ಲಿ ಇಟ್ಟಿದ್ದೀರಿ.
8 ಸಮಾಧಾನವಾಗಿ ಮಲಗಿ ನಿದ್ರೆ ಮಾಡುವೆನು,
ಏಕೆಂದರೆ ಯೆಹೋವ ದೇವರೇ,
ನೀವೊಬ್ಬರೇ ನನ್ನನ್ನು ಸುರಕ್ಷಿತವಾಗಿ ವಾಸಿಸುವಂತೆ ಮಾಡುತ್ತೀರಿ.