3
ಒಳ್ಳೆಯದನ್ನು ಮಾಡುವುದು
ಆಳುವವರಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕೆಂತಲೂ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಸಿದ್ಧರಾಗಿರಬೇಕೆಂತಲೂ ಅವರಿಗೆ ಜ್ಞಾಪಕಮಾಡು. ಯಾರ ವಿಷಯವಾಗಿಯೂ ಕೆಟ್ಟದ್ದನ್ನಾಡದೆ, ಎಲ್ಲರೊಂದಿಗೆ ಸಮಾಧಾನವಾಗಿಯೂ ಇತರರನ್ನು ಅರ್ಥಮಾಡಿಕೊಳ್ಳುವವರಾಗಿಯೂ ಯಾವಾಗಲೂ ನಮ್ರರಾಗಿ ಇರಬೇಕೆಂತಲೂ ಅವರಿಗೆ ಜ್ಞಾಪಕಮಾಡು.
ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸ ಹೋದವರೂ ವಿವಿಧ ಆಶೆಗಳಿಗೂ ಭೋಗಗಳಿಗೂ ದಾಸರಾಗಿದ್ದೆವು. ಕೆಟ್ಟತನ ಹಾಗೂ ಮತ್ಸರಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ದ್ವೇಷಿಸುವವರೂ ಆಗಿದ್ದೆವು. ಆದರೆ ನಮಗೆ ರಕ್ಷಕರೂ ದೇವರೂ ಆಗಿರುವ ಕ್ರಿಸ್ತ ಯೇಸುವಿನ ದಯೆಯೂ ಪ್ರೀತಿಯೂ ಮನುಷ್ಯರ ಕಡೆಗೆ ಪ್ರತ್ಯಕ್ಷವಾದಾಗ, ಅವರು ನಮ್ಮನ್ನು ರಕ್ಷಿಸಿದರು. ಹೇಗೆಂದರೆ, ನಾವು ಮಾಡಿದ ಪುಣ್ಯ ಕ್ರಿಯೆಗಳಿಂದಲ್ಲ, ಅವರ ಕರುಣೆಗೆ ಅನುಸಾರವಾಗಿ ಆತ್ಮಿಕವಾಗಿ ಹುಟ್ಟುವಂತೆ ಮಾಡಿ, ನಮ್ಮನ್ನು ತೊಳೆದೂ ಪವಿತ್ರಾತ್ಮ ದೇವರು ನೂತನ ಜೀವನವನ್ನು ಕೊಡುವುದರ ಮೂಲಕವೇ ಅವರು ನಮ್ಮನ್ನು ರಕ್ಷಿಸಿದರು. ನಮಗೆ ರಕ್ಷಕರಾದ ಕ್ರಿಸ್ತ ಯೇಸುವಿನ ಮೂಲಕ ದೇವರು ಪವಿತ್ರಾತ್ಮ ದೇವರನ್ನು ನಮ್ಮ ಮೇಲೆ ಸಮೃದ್ಧವಾಗಿ ಸುರಿಸಿದರು. ನಾವು ಅವರ ಕೃಪೆಯಿಂದ ನೀತಿವಂತರೆಂದು ನಿರ್ಣಯ ಹೊಂದಿ, ನಿತ್ಯಜೀವದ ನಿರೀಕ್ಷೆಗೆ ಅನುಸಾರವಾಗಿ ಬಾಧ್ಯರಾಗುವಂತೆ ಮಾಡಿದರು. ಇದು ನಂಬತಕ್ಕ ಮಾತಾಗಿದೆ. ದೇವರನ್ನು ನಂಬಿದವರು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರುವಂತೆ ನೀನು ಇವುಗಳ ವಿಷಯವಾಗಿ ಪ್ರಾಮುಖ್ಯತೆಯನ್ನು ಕೊಡಬೇಕೆಂದು ಅಪೇಕ್ಷಿಸುತ್ತೇನೆ. ಇವು ಮನುಷ್ಯರಿಗೆ ಹಿತಕರವೂ ಪ್ರಯೋಜನಕರವೂ ಆಗಿವೆ.
ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ನಿಯಮದ ವಿಷಯವಾಗಿರುವ ವಾಗ್ವಾದಗಳಿಗೂ ದೂರವಾಗಿರು. ಏಕೆಂದರೆ ಅವು ನಿಷ್ಪ್ರಯೋಜನವಾದವುಗಳೂ ವ್ಯರ್ಥವಾದವುಗಳೂ ಆಗಿವೆ. 10 ಭೇದ ಹುಟ್ಟಿಸುವವರನ್ನು ಒಂದೆರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟುಬಿಡು. ಅಂಥವರ ಸಹವಾಸ ಮಾಡದಿರು. 11 ಅಂಥವರು ಸನ್ಮಾರ್ಗ ತಪ್ಪಿದವರೂ ತಮ್ಮನ್ನು ತಾವೇ ಖಂಡಿಸಿಕೊಳ್ಳುವವರಾಗಿ ಪಾಪಮಾಡುವವರೂ ಆಗಿದ್ದಾರೆಂದು ನಿಶ್ಚಯವಾಗಿ ತಿಳಿದುಕೊ.
 
ಕಡೇ ಮಾತುಗಳು
12 ನಾನು ಅರ್ತೆಮನನ್ನಾಗಲಿ, ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದಾಗ ನೀನು ನಿಕೊಪೊಲಿಯಲ್ಲಿ ನನ್ನ ಹತ್ತಿರ ಬರುವುದಕ್ಕೆ ಪ್ರಯತ್ನ ಮಾಡು. ಅಲ್ಲಿಯೇ ಚಳಿಗಾಲವನ್ನು ಕಳೆಯಬೇಕೆಂದು ನಾನು ತೀರ್ಮಾನಿಸಿದ್ದೇನೆ. 13 ನಿಯಮ ಪಂಡಿತನಾದ ಜೇನನನ್ನೂ ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಸಾಗಕಳುಹಿಸು. ಅವರಿಗೇನೂ ಕೊರತೆಯಾಗಬಾರದು.
 
14 ನಮ್ಮವರು ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೂ ಅಗತ್ಯವಾಗಿರುವ ಕೊರತೆಗಳನ್ನು ನೀಗಿಸುವುದಕ್ಕೂ ಕಲಿತುಕೊಳ್ಳಲಿ. ಆಗ ಅವರು ನಿಷ್ಪಲರಾಗದೇ ಇರುವರು.
 
15 ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ.
ವಿಶ್ವಾಸದಲ್ಲಿ ನಮ್ಮನ್ನು ಪ್ರೀತಿಸುವವರಿಗೆ ವಂದನೆಗಳನ್ನು ಹೇಳು.
 
ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ!