27
ದಾವೀದನು ಫಿಲಿಷ್ಟಿಯರ ನಡುವೆ ವಾಸಿಸಿದ್ದು
ದಾವೀದನು ತನ್ನ ಮನಸ್ಸಿನಲ್ಲಿ, “ನಾನು ಇಲ್ಲೇ ಇದ್ದರೆ ಹೇಗೂ ಒಂದು ದಿನ ಸೌಲನ ಕೈಯಿಂದ ಸಾಯಲೇಬೇಕು ಆದ್ದರಿಂದ ಫಿಲಿಷ್ಟಿಯರ ದೇಶಕ್ಕೆ ಹೋಗಿ ತಪ್ಪಿಸಿಕೊಳ್ಳುವುದೇ ಉತ್ತಮ. ಆ ಮೇಲೆ ಸೌಲನು ಇಸ್ರಾಯೇಲ್ಯರ ಪ್ರಾಂತ್ಯಗಳಲ್ಲಿ ನನ್ನನ್ನು ಹುಡುಕದೆ ಬಿಟ್ಟುಬಿಡುವನು. ನಾನು ಅವನ ಕೈಗೆ ತಪ್ಪಿಸಿಕೊಂಡವನಾಗಿರುವೆನು” ಅಂದುಕೊಂಡನು. ಅವನು ತನ್ನ ಆರುನೂರು ಜನರೊಡನೆ ಗತ್ ಊರಿನ ಅರಸನೂ ಮಾವೋಕನ ಮಗನೂ ಆದ ಆಕೀಷನ ಬಳಿಗೆ ಹೋದನು. ಅವನೂ, ಅವನ ಜನರೂ ತಮ್ಮ ತಮ್ಮ ಕುಟುಂಬ ಸಹಿತವಾಗಿ ಆಕೀಷನ ಊರಾದ ಗತ್ ಊರಿನಲ್ಲಿ ವಾಸಮಾಡಿದರು. ದಾವೀದನ ಹೆಂಡತಿಯರಾಗಿರುವ ಇಜ್ರೇಲ್ಯಳಾದ ಅಹೀನೋವಮಳೂ, ಕರ್ಮೇಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಅವನ ಸಂಗಡ ಇದ್ದರು. ದಾವೀದನು ತಪ್ಪಿಸಿಕೊಂಡು ಗತ್ ಊರಿಗೆ ಹೋದನೆಂಬ ವರ್ತಮಾನವನ್ನು ಸೌಲನು ಕೇಳಿದ ಮೇಲೆ ಅವನನ್ನು ಹುಡುಕಲೇ ಇಲ್ಲ. ಒಂದು ದಿನ ದಾವೀದನು ಆಕೀಷನಿಗೆ, “ನಿನ್ನ ಸೇವಕನಾದ ನಾನು ನಿನ್ನ ಸಂಗಡ ರಾಜಧಾನಿಯಲ್ಲೇಕೆ ವಾಸಿಸಬೇಕು? ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿರುವುದಾದರೆ ಯಾವುದಾದರು ಒಂದು ಪಟ್ಟಣದಲ್ಲಿ ನನಗೆ ಸ್ಥಳಕೊಡು. ನಾನು ಅಲ್ಲಿ ವಾಸಮಾಡುವೆನು” ಅಂದನು. ಆಕೀಷನು ಕೂಡಲೇ ಅವನಿಗೆ ಚಿಕ್ಲಗ್ ಊರನ್ನು ಕೊಟ್ಟುಬಿಟ್ಟನು. ಆದ್ದರಿಂದ ಚಿಕ್ಲಗ್ ಎಂಬುದು ಇಂದಿನವರೆಗೂ ಯೆಹೂದ ರಾಜರಿಗೆ ಸೇರಿದೆ.
ದಾವೀದನು ಫಿಲಿಷ್ಟಿಯರ ದೇಶದಲ್ಲಿ ಒಂದು ವರ್ಷ ನಾಲ್ಕು ತಿಂಗಳೂ ವಾಸವಾಗಿದ್ದನು. ಆ ಕಾಲದಲ್ಲಿ ಅವನೂ, ಅವನ ಜನರೂ ತೇಲಾಮಿನಿಂದ ಶೂರಿನವರೆಗೂ, ಐಗುಪ್ತ ದೇಶದವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ವಾಸಿಸುತ್ತಿರುವ ಗೆಷೂರ್ಯರು, ಗಿಜ್ರೀಯರು, ಅಮಾಲೇಕ್ಯರು ಇವರ ಮೇಲೆ ಆಕ್ರಮಣ ಮಾಡಿ ಸುಲಿದುಕೊಳ್ಳುತ್ತಿದ್ದರು. ದಾವೀದನು ಸ್ತ್ರೀಪುರುಷರಲ್ಲಿ ಒಬ್ಬರನ್ನೂ ಉಳಿಸದೆ ದೇಶದ ಎಲ್ಲಾ ನಿವಾಸಿಗಳನ್ನು ಕೊಂದು, ಕುರಿ, ದನ, ಕತ್ತೆ, ಒಂಟೆ, ಉಡುಗೊರೆ ಇವುಗಳನ್ನು ತೆಗೆದುಕೊಂಡು ಆಕೀಷನ ಬಳಿಗೆ ಹೋಗುತ್ತಿದ್ದನು. 10 ಆಕೀಷನು ಅವನನ್ನು “ಈ ಹೊತ್ತು ಯಾವ ಪ್ರಾಂತ್ಯದವರನ್ನು ಸೂರೆಮಾಡಿಕೊಂಡು ಬಂದಿರಿ” ಎಂದು ಕೇಳುವನು. ದಾವೀದನು ಅವನಿಗೆ “ದಕ್ಷಿಣ ಪ್ರಾಂತ್ಯದಲ್ಲಿರುವ ಯೆಹೂದ್ಯರು, ಎರಹ್ಮೇಲ್ಯರು ಕೇನ್ಯರು ಇವರಲ್ಲಿ ಯಾರ ಹೆಸರನ್ನಾದರೂ” ಹೇಳುವರು. 11 ದಾವೀದನು ತನ್ನ ಕೃತ್ಯವನ್ನು ಜನರು ಹೇಳಾರೆಂದು ನೆನಸಿ, ಅವನು ಯಾರನ್ನೂ ಗತ್ ಊರಿಗೆ ತಾರದೆ, ಎಲ್ಲಾ ಸ್ತ್ರೀಪುರುಷರನ್ನು ಅಲ್ಲೇ ಕೊಂದುಹಾಕುತ್ತಿದ್ದನು. ಅವನು ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಇದೇ ರೀತಿ ಮಾಡುತ್ತಿದ್ದನು. 12 ದಾವೀದನ ಹೆಸರು ಸ್ವಜನರಾದ ಇಸ್ರಾಯೇಲರಲ್ಲಿ ತನ್ನ ಹೆಸರನ್ನು ಕೆಡಿಸಿಕೊಂಡಿದ್ದರಿಂದ ಇವನು ತನ್ನ ನಿತ್ಯ ದಾಸನಾಗಿರುವನೆಂದು ಆಕೀಷನು ನಂಬಿಕೊಂಡನು.