27
ಕಲ್ಲಿನ ಕಂಬಗಳ ಮೇಲೆ ಕೆತ್ತಿಸಬೇಕಾದ ಧರ್ಮಶಾಸ್ತ್ರವಾಕ್ಯಗಳು
1 ಮೋಶೆ ಮತ್ತು ಇಸ್ರಾಯೇಲರ ಹಿರಿಯರ ಸಹಿತ ಜನರಿಗೆ, “ನಾನು ಈಗ ನಿಮಗೆ ಆಜ್ಞಾಪಿಸಿದ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸಬೇಕು. 2 ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಪ್ರವೇಶಿಸುವುದಕ್ಕೆ ನೀವು ಯೊರ್ದನ್ ನದಿಯನ್ನು ದಾಟುವಾಗ ನೀವು ದೊಡ್ಡ ಕಲ್ಲುಗಳನ್ನು ನಿಲ್ಲಿಸಿ, ಅವುಗಳಿಗೆ ಗಿಲಾವು ಮಾಡಿಸಬೇಕು. 3 ನಿಮ್ಮ ಪೂರ್ವಿಕರ ದೇವರಾದ ಯೆಹೋವನು ತಾನು ವಾಗ್ದಾನಮಾಡಿದಂತೆ ನಿಮಗೆ ಕೊಡುವ * 27:3 ಬಹಳಷ್ಟು ಫಲವತ್ತಾದ ದೇಶ.ಹಾಲೂ ಮತ್ತು ಜೇನೂ ಹರಿಯುವ ದೇಶವನ್ನು ಪ್ರವೇಶಿಸುವುದಕ್ಕೆ ನೀವು ಯೊರ್ದನ್ ನದಿಯನ್ನು ದಾಟುವಾಗ ಈ ಧರ್ಮಶಾಸ್ತ್ರದ ವಾಕ್ಯಗಳನ್ನೆಲ್ಲಾ ಆ ದೊಡ್ಡ ಕಲ್ಲುಗಳ ಮೇಲೆ ಬರೆಯಿಸಬೇಕು. 4 ನೀವು ಯೊರ್ದನ್ ನದಿಯನ್ನು ದಾಟಿದ ನಂತರ ನಾನು ಈಗ ಆಜ್ಞಾಪಿಸಿದ ಕಲ್ಲುಗಳನ್ನು ಏಬಾಲ್ ಬೆಟ್ಟದ ಮೇಲೆ ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಬೇಕು.
5 “ಅಲ್ಲಿ ನಿಮ್ಮ ದೇವರಾದ ಯೆಹೋವನಿಗೋಸ್ಕರ ನೀವು ಕಲ್ಲುಗಳಿಂದ ಯಜ್ಞವೇದಿಯನ್ನು ಕಟ್ಟಿಸಬೇಕು. 6 ಉಳಿ ಮುಂತಾದದ್ದನ್ನು ಉಪಯೋಗಿಸದೆ ಹುಟ್ಟುಕಲ್ಲುಗಳಿಂದಲೇ ನಿಮ್ಮ ದೇವರಾದ ಯೆಹೋವನ ಯಜ್ಞವೇದಿಯನ್ನು ಕಟ್ಟಿಸಬೇಕು. 7 ಅಲ್ಲಿ ಸರ್ವಾಂಗಹೋಮಗಳನ್ನೂ ಮತ್ತು ಸಮಾಧಾನಯಜ್ಞಗಳನ್ನೂ ಸಮರ್ಪಿಸಿ, ಸಹಭೋಜನಮಾಡಿ, ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಸಂಭ್ರಮಿಸಬೇಕು. 8 ನೀವು ಆ ಕಲ್ಲುಗಳ ಮೇಲೆ ಈ ಧರ್ಮಶಾಸ್ತ್ರದ ವಾಕ್ಯಗಳನ್ನೆಲ್ಲಾ ಸ್ಪಷ್ಟವಾಗಿ ಬರೆಯಬೇಕು” ಎಂದು ಆಜ್ಞಾಪಿಸಿದನು.
9 ಮೋಶೆ, ಯಾಜಕರು ಮತ್ತು ಲೇವಿಯರೊಡನೆ ಇಸ್ರಾಯೇಲರೆಲ್ಲರಿಗೆ, “ಇಸ್ರಾಯೇಲರೇ, ನಿಶ್ಯಬ್ದವಾಗಿದ್ದು ಕೇಳಿರಿ, ನೀವು ಈಗ ನಿಮ್ಮ ದೇವರಾದ ಯೆಹೋವನ ಜನರಾಗಿದ್ದೀರಷ್ಟೆ. 10 ಆದುದರಿಂದ ಈಗ ನಾನು ನಿಮಗೆ ಹೇಳುವ ನಿಮ್ಮ ದೇವರಾದ ಯೆಹೋವನ ಮಾತುಗಳಿಗೆ ಕಿವಿಗೊಟ್ಟು ಆತನ ಆಜ್ಞಾವಿಧಿಗಳನ್ನು ಅನುಸರಿಸಬೇಕು” ಎಂದು ಹೇಳಿದನು.
ಅವಿಧೇಯರಿಗೆ ಶಾಪಗಳು
11 ಮೋಶೆ ಆ ದಿನದಲ್ಲಿ ಜನರಿಗೆ ಆಜ್ಞಾಪಿಸಿದ್ದೇನೆಂದರೆ, 12 “ನೀವು ಯೊರ್ದನ್ ನದಿಯನ್ನು ದಾಟಿದಾಗ ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್ ಮತ್ತು ಬೆನ್ಯಾಮೀನ್ ಎಂಬ ಈ ಕುಲಗಳವರು ಗೆರಿಜ್ಜೀಮ್ ಬೆಟ್ಟದ ಮೇಲೆ ನಿಂತುಕೊಂಡು ಆಶೀರ್ವಾದಗಳನ್ನು ಉಚ್ಚರಿಸಬೇಕು. 13 ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್ ಮತ್ತು ನಫ್ತಾಲಿ ಎಂಬ ಈ ಕುಲಗಳವರು ಏಬಾಲ್ ಬೆಟ್ಟದ ಮೇಲೆ ನಿಂತುಕೊಂಡು ಶಾಪೋಕ್ತಿಗಳನ್ನು ಉಚ್ಚರಿಸಬೇಕು.
14 “ಲೇವಿಯರು ಗಟ್ಟಿಯಾದ ಸ್ವರದಿಂದ ಇಸ್ರಾಯೇಲರೆಲ್ಲರಿಗೂ, 15 ‘ಶಿಲ್ಪಿಯ ಕೆಲಸವಾಗಿರುವ ಮರದ ವಿಗ್ರಹ ಮತ್ತು ಲೋಹವಿಗ್ರಹ ಯೆಹೋವನಿಗೆ ಅಸಹ್ಯವಾದುದರಿಂದ ಅವುಗಳನ್ನು ಮಾಡಿಸಿ ಗುಪ್ತವಾಗಿ ನಿಲ್ಲಿಸಿಕೊಂಡವನು ಶಾಪಗ್ರಸ್ತನು’ ಎಂದು ಹೇಳಲು ಜನರೆಲ್ಲರೂ, ‘ಆಮೆನ್’ ” ಅನ್ನಬೇಕು.
16 “ಲೇವಿಯರು, ತಂದೆತಾಯಿಗಳನ್ನು ಅವಮಾನಪಡಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
17 “ಅವರು, ಮತ್ತೊಬ್ಬನ ಗಡಿಮೇರೆಯನ್ನು ಮೀರಿಬಂದವನು ಶಾಪಗ್ರಸ್ತನು” ಎಂದು ಹೇಳಲು, “ಆಮೆನ್” ಅನ್ನಬೇಕು.
18 “ಅವರು, ಕುರುಡರಿಗೆ ದಾರಿತಪ್ಪಿಸಿದವನು ಶಾಪಗ್ರಸ್ತನು” ಎಂದು ಹೇಳಲು, “ಆಮೆನ್” ಅನ್ನಬೇಕು.
19 “ಅವರು, ಪರದೇಶಿ, ಅನಾಥ, ಇವರ ವ್ಯಾಜ್ಯದಲ್ಲಿ ನ್ಯಾಯ ಬಿಟ್ಟು ತೀರ್ಪುಹೇಳಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
20 “ಅವರು, ಮಲತಾಯಿಯನ್ನು ಸಂಗಮಿಸಿ ತಂದೆಗೆ ಅವಮಾನಪಡಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
21 “ಅವರು, ಪಶುಸಂಗಮ ಮಾಡಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
22 “ಅವರು, ತಂದೆಯ ಮಗಳನ್ನಾಗಲಿ ಅಥವಾ ತಾಯಿಯ ಮಗಳನ್ನಾಗಲಿ ಸಂಗಮಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
23 “ಅವರು, ಅತ್ತೆಯನ್ನು ಸಂಗಮಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
24 “ಅವರು, ರಹಸ್ಯವಾಗಿ ನರಹತ್ಯಮಾಡಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.
25 “ಅವರು, ಹಣ ತೆಗೆದುಕೊಂಡು ನಿರಪರಾಧಿಯನ್ನು ಕೊಂದವನು ಶಾಪಗ್ರಸ್ತನು” ಎನ್ನಲಾಗಿ ಜನರೆಲ್ಲರೂ, “ಆಮೆನ್” ಅನ್ನಬೇಕು.
26 “ಅವರು, ಈ ಧರ್ಮಶಾಸ್ತ್ರವಾಕ್ಯಗಳಿಗೆ ಒಡಂಬಟ್ಟು ಕೈಕೊಳ್ಳದೆ ಇರುವವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.