11
ನೀರಿನ ಮೇಲೆ ರೊಟ್ಟಿ
1 ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು,
ಬಹಳ ದಿನಗಳ ನಂತರ ಅದು ನಿನಗೆ ಸಿಕ್ಕುವುದು.
2 ನೀನು ಅದನ್ನು ಏಳು ಮತ್ತು ಎಂಟು ಮಂದಿಗೆ ಹಂಚಿಬಿಡು.
ಲೋಕದಲ್ಲಿ ಮುಂದೆ ಸಂಭವಿಸುವ ಕೇಡು ನಿನಗೆ ಗೊತ್ತಿಲ್ಲ.
3 ಮಳೆ ತುಂಬಿದ ಮೋಡಗಳು,
ತಾವಾಗಿಯೇ ಭೂಮಿಯ ಮೇಲೆ ಸುರಿದುಬಿಡುವವು,
ಮರವು ಉತ್ತರಕ್ಕಾಗಲಿ, ದಕ್ಷಿಣಕ್ಕಾಗಲಿ,
ಬಿದ್ದರೆ ಬಿದ್ದ ಸ್ಥಳದಲ್ಲಿಯೇ ಇರುವುದು.
4 ಗಾಳಿಯನ್ನು ನೋಡುತ್ತಲೇ ಇರುವವನು ಬೀಜವನ್ನು ಬಿತ್ತುವುದಿಲ್ಲ,
ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರನ್ನು ಕೊಯ್ಯುವುದಿಲ್ಲ.
5 ಗಾಳಿಯ ಮಾರ್ಗವನ್ನೂ,
ಗರ್ಭಿಣಿಯ ಗರ್ಭದಲ್ಲಿ ಎಲುಬುಗಳು ಬೆಳೆಯುವ ರೀತಿಯನ್ನೂ,
ನೀನು ಹೇಗೆ ತಿಳಿಯುವುದಿಲ್ಲವೋ ಹಾಗೆಯೇ,
ಸರ್ವಶಕ್ತನಾದ ದೇವರ ಕಾರ್ಯವನ್ನು ಅರಿಯುವುದಿಲ್ಲ.
6 ಮುಂಜಾನೆ ಬೀಜ ಬಿತ್ತು;
ಸಂಜೆಯ ತನಕ ಕೈಯನ್ನು ಹಿಂದಕ್ಕೆ ತೆಗೆಯಬೇಡ,
ಇದು ಸಫಲವಾಗುವುದೋ ಅಥವಾ ಅದು ಸಫಲವಾಗುವುದೋ,
ಇಲ್ಲವೇ ಒಂದು ವೇಳೆ ಎರಡೂ
ಒಳ್ಳೆಯದಾಗುವುದೋ ನಿನಗೆ ತಿಳಿಯದು.
ಯೌವನದಲ್ಲಿ ಸೃಷ್ಟಿಕರ್ತನನ್ನು ಸ್ಮರಿಸು
7 ನಿಜವಾಗಿ ಬೆಳಕು ಇಂಪಾಗಿಯೂ,
ಮತ್ತು ಸೂರ್ಯನನ್ನು ಕಾಣುವುದು ಕಣ್ಣಿಗೆ ಹಿತವಾಗಿಯೂ ಇರುವುದು.
8 ಬಹಳ ವರ್ಷ ಬದುಕುವವನು,
ಅವುಗಳಲ್ಲೆಲ್ಲಾ ಆನಂದಿಸಲಿ,
ಆದರೆ ಅಂಧಕಾರದ ದಿನಗಳನ್ನು ನೆನಪಿಗೆ ತರಲಿ,
ಏಕೆಂದರೆ ಅವು ಬಹಳವಾಗಿರುವವು.
ಮುಂದಾಗುವುದೆಲ್ಲ ವ್ಯರ್ಥವೇ.
9 ಯೌವನಸ್ಥನೇ, ಯೌವನಪ್ರಾಯದಲ್ಲಿ ಆನಂದಿಸು,
ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ.
ಮನಸ್ಸಿಗೆ ತಕ್ಕಂತೆಯೂ,
ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೋ.
ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು.
10 ನಿನ್ನ ಹೃದಯದಿಂದ ದುಃಖವನ್ನೂ,
ದೇಹದಿಂದ ಶ್ರಮೆಯನ್ನೂ ತೊಲಗಿಸು,
ಏಕೆಂದರೆ ಬಾಲ್ಯವೂ, ಯೌವನವೂ ವ್ಯರ್ಥವಷ್ಟೆ.