13
ಯೇಸು ತನ್ನ ಶಿಷ್ಯರ ಕಾಲುಗಳನ್ನು ತೊಳೆದದ್ದು
1 ಪಸ್ಕಹಬ್ಬದ ಹಿಂದಿನ ದಿನ ಯೇಸು, ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆ ಬಂದಿತೆಂದು ತಿಳಿದುಕೊಂಡು, ಈ ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ, ಅವರನ್ನು ಕೊನೆಯವರೆಗೂ ಪ್ರೀತಿಸುತ್ತಾ ಬಂದನು. 2 ಅವರು ಭೋಜನಕ್ಕೆ ಕುಳಿತುಕೊಂಡಿದ್ದರು, ಅಷ್ಟರೊಳಗೆ * 13:2 ಯೋಹಾ 13:27; ಲೂಕ 22:3:ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದನು. 3 ತಂದೆಯು ತನ್ನ ಕೈಯಲ್ಲಿ ಎಲ್ಲದರ ಮೇಲೆ ಅಧಿಕಾರ ಕೊಟ್ಟಿದ್ದಾನೆಂದೂ, ತಾನು ದೇವರ ಬಳಿಯಿಂದ ಬಂದು, ತಿರುಗಿ ದೇವರ ಬಳಿಗೆ ಹೋಗುತ್ತೇನೆಂದೂ ಯೇಸುವಿಗೆ ತಿಳಿದಿತ್ತು. 4 ಆತನು ಊಟದಿಂದ ಎದ್ದು ತನ್ನ ಮೇಲುಹೊದಿಕೆಯನ್ನು ತೆಗೆದಿಟ್ಟು ಅಂಗ ವಸ್ತ್ರವನ್ನು ತೆಗೆದುಕೊಂಡು ನಡುವಿಗೆ ಕಟ್ಟಿಕೊಂಡನು. 5 ಅನಂತರ ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುತ್ತಾ, ತಾನು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರಸುವುದಕ್ಕೂ ಪ್ರಾರಂಭಿಸಿದನು. 6 ಹೀಗೆ ಆತನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಆತನಿಗೆ, “ಕರ್ತನೇ, ನೀನು ನನ್ನ ಪಾದಗಳನ್ನು ತೊಳೆಯುತ್ತೀಯೋ?” ಎಂದು ಹೇಳಿದನು. 7 ಅದಕ್ಕೆ ಯೇಸು “ನಾನು ಮಾಡುವುದು ಏನೆಂದು ಈಗ ನಿನಗೆ ತಿಳಿಯುವುದಿಲ್ಲ. ಆನಂತರ ನಿನಗೆ ತಿಳಿಯುವುದು” ಎಂದನು. 8 ಪೇತ್ರನು ಆತನಿಗೆ, “ನೀನು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು” ಎಂದು ಹೇಳಿದ್ದಕ್ಕೆ, ಯೇಸು, “ನಾನು ನಿನ್ನನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇರುವುದಿಲ್ಲ” ಎಂದನು. 9 ಸೀಮೋನ ಪೇತ್ರನು, “ಕರ್ತನೇ, ನನ್ನ ಪಾದಗಳನ್ನು ಮಾತ್ರವಲ್ಲದೆ, ಕೈಗಳನ್ನೂ, ತಲೆಯನ್ನೂ ಸಹ ತೊಳೆ” ಎಂದನು. 10 ಯೇಸು ಅವನಿಗೆ, “ಸ್ನಾನಮಾಡಿಕೊಂಡವನಿಗೆ ತನ್ನ ಪಾದಗಳನ್ನು ಮಾತ್ರ ತೊಳೆದುಕೊಂಡರೆ ಸಾಕು, ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವೂ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದನು. 11 ಯೇಸು ತನ್ನನ್ನು ಹಿಡಿದು ಕೊಡುವವನು ಯಾರೆಂದು ತಿಳಿದಿದ್ದರಿಂದ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದ್ದನು.
12 ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲುಹೊದಿಕೆಯನ್ನು ಹಾಕಿಕೊಂಡು, ಪುನಃ ಕುಳಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ? 13 ನೀವು ನನ್ನನ್ನು ಗುರುವೆಂದೂ ಮತ್ತು ಕರ್ತನೆಂದೂ ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ. 14 ಹಾಗಾದರೆ ಕರ್ತನೂ, ಗುರುವೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ, ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು. 15 ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ. 16 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ತನ್ನ ದಣಿಗಿಂತ ಆಳು ದೊಡ್ಡವನಲ್ಲ. ಹಾಗೆಯೇ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17 ನೀವು ಇವುಗಳನ್ನು ತಿಳಿದುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು. 18 ನಾನು ನಿಮ್ಮೆಲ್ಲರನ್ನು ಕುರಿತು ಈ ಮಾತನ್ನು ಹೇಳಲಿಲ್ಲ. ನಾನು ಆರಿಸಿಕೊಂಡವರೆಲ್ಲರನ್ನು ನಾನು ಬಲ್ಲೆನು. ಆದರೆ† 13:18 ಕೀರ್ತ 41:9:ನನ್ನ ಜೊತೆಯಲ್ಲಿ ಊಟಮಾಡುವವನೇ, ನನಗೆ ದ್ರೋಹ ಬಗೆದನು, ಎಂಬ ಶಾಸ್ತ್ರದ ಮಾತು ನೆರವೇರಬೇಕಾಗಿದೆ. 19 ಅದು ನಡೆಯುವಾಗ ನಾನೇ ಆತನು ಎಂದು ನೀವು ನಂಬುವಂತೆ, ಅದು ಸಂಭವಿಸುವುದಕ್ಕಿಂತ ಮೊದಲೇ ಅದನ್ನು ಈಗ ನಿಮಗೆ ಹೇಳುತ್ತಿದ್ದೇನೆ. 20 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ನಾನು ಕಳುಹಿಸಿದಾತನನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುತ್ತಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ.”
ಯೇಸು ತನ್ನನ್ನು ಹಿಡಿದುಕೊಡುವವನನ್ನು ಸೂಚಿಸಿದ್ದು
21 ಇದನ್ನು ಹೇಳುತ್ತಾ ಯೇಸು ಆತ್ಮದಲ್ಲಿ ನೊಂದುಕೊಂಡವನಾಗಿ, “ನಾನು‡ 13:21 ಮತ್ತಾ 26:21-25; ಮಾರ್ಕ 14:18-20; ಲೂಕ 22:21-23:ನಿಮಗೆ ನಿಜನಿಜವಾಗಿ ಹೇಳುತ್ತೇನೆ; ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದು ಕೊಡುತ್ತಾನೆ” ಎಂದು ಸಾಕ್ಷಿ ಹೇಳಿದನು. 22 ಆಗ ಈತನು ಯಾರ ವಿಷಯವಾಗಿ ಈ ಮಾತನ್ನು ಹೇಳುತ್ತಾನೆಂದು ಶಿಷ್ಯರು ಗಲಿಬಿಲಿಗೊಂಡು ಒಬ್ಬರನೊಬ್ಬರು ನೋಡಿಕೊಂಡರು. 23 ಶಿಷ್ಯರೊಳಗೆ ಯೇಸುವಿಗೆ ಪ್ರಿಯನಾಗಿದ್ದ ಒಬ್ಬ ಶಿಷ್ಯನು ಆತನ ಎದೆಗೆ ಒರಗಿಕೊಂಡಿದ್ದನು. 24 ಅವನಿಗೆ ಸೀಮೋನ ಪೇತ್ರನು ಸನ್ನೆಮಾಡಿ, “ಆತನು ಯಾರ ವಿಷಯವಾಗಿ ಮಾತನಾಡಿದನು ಎಂದು ಕೇಳು” ಅಂದನು. 25 ಆ ಶಿಷ್ಯನು ಹಾಗೆಯೇ ಯೇಸುವಿನ ಎದೆಗೆ ಒರಗಿಕೊಂಡವನಾಗಿ, “ಕರ್ತನೇ, ಅವನು ಯಾರು?” ಎಂದು ಆತನನ್ನು ಕೇಳಿದನು. 26 ಅದಕ್ಕೆ ಯೇಸು, “ನಾನು ಈ ರೊಟ್ಟಿಯ ತುಂಡನ್ನು ಅದ್ದಿ ಯಾರಿಗೆ ಕೊಡುತ್ತೇನೋ ಅವನೇ!” ಎಂದು ಉತ್ತರಿಸಿ ಆ ರೊಟ್ಟಿಯ ತುಂಡನ್ನು ಅದ್ದಿ, ತೆಗೆದು, ಸೀಮೋನ್ ಇಸ್ಕರಿಯೋತನ ಮಗನಾದ ಯೂದನಿಗೆ ಕೊಟ್ಟನು. 27 ಅವನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, “ನೀನು ಮಾಡುವುದನ್ನು ಬೇಗನೇ ಮಾಡು” ಎಂದು ಹೇಳಿದನು. 28 ಆದರೆ ಆತನು ಅವನಿಗೆ ಇದನ್ನು ಏಕೆ ಹೇಳಿದನೆಂದು ಊಟದ ಮೇಜಿನಲ್ಲಿ ಕುಳಿತವರಲ್ಲಿ ಯಾರಿಗೂ ತಿಳಿಯಲಿಲ್ಲ. 29 ಅವರಲ್ಲಿ ಕೆಲವರು, ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ ಯೇಸು ಅವನಿಗೆ “ಹಬ್ಬಕ್ಕೆ ನಮಗೆ ಅಗತ್ಯವಾದವುಗಳನ್ನು ಕೊಂಡುಕೋ ಎಂದೋ, ಅಥವಾ ಬಡವರಿಗೆ ಏನಾದರೂ ಕೊಡು ಎಂದೋ, ಯೇಸು ಅವನಿಗೆ ಹೇಳುತ್ತಾನೆ” ಎಂದು ಅಂದುಕೊಂಡರು. 30 ಇಸ್ಕರಿಯೋತ ಯೂದನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಅಲ್ಲಿಂದ ಎದ್ದು ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.
ಹೊಸ ಆಜ್ಞೆ
31 ಅವನು ಹೊರಗೆ ಹೋದ ಮೇಲೆ ಯೇಸುವು, “ಈಗ ಮನುಷ್ಯಕುಮಾರನು ಮಹಿಮೆ ಹೊಂದುತ್ತಾನೆ, ಮತ್ತು§ 13:31 ಯೋಹಾ 14:13; 15:8; 17:1,4:ದೇವರು ಆತನಲ್ಲಿ ಮಹಿಮೆ ಹೊಂದಿದ್ದಾನೆ. 32 ದೇವರು ಆತನಲ್ಲಿ ಮಹಿಮೆ ಹೊಂದಿರುವುದರಿಂದ, ದೇವರು ಸಹ ಮನುಷ್ಯಕುಮಾರನನ್ನು* 13:32 ಯೋಹಾ 17:1,5; 12:23:ತನ್ನಲ್ಲಿ ಮಹಿಮೆಪಡಿಸುವನು. ತಕ್ಷಣವೇ ಮಹಿಮೆಪಡಿಸುವನು. 33 ನನ್ನ ಮಕ್ಕಳೇ,† 13:33 ಯೋಹಾ 7:33,34; 14:19; 16:16:ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ. ನೀವು ನನ್ನನ್ನು ಹುಡುಕುವಿರಿ ಆದರೆ ‘ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ. 34 ‡ 13:34 ರೋಮಾ. 13:8; 1 ಯೋಹಾ 3:23:ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ಏನೆಂದರೆ, ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು, ಎಂಬುದೇ. 35 ನಿಮ್ಮೊಳಗೆ ಪರಸ್ಪರ ಪ್ರೀತಿಯಿರುವುದಾದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳುವರು” ಎಂದನು.
36 ಸೀಮೋನ್ ಪೇತ್ರನು ಆತನಿಗೆ, “ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ?” ಎಂದು ಕೇಳಿದ್ದಕ್ಕೆ ಯೇಸು ಅವನಿಗೆ, “ನಾನು ಹೋಗುವ ಕಡೆಗೆ, ಈಗ ನೀನು ನನ್ನನ್ನು ಹಿಂಬಾಲಿಸಲಾರೆ. ಅನಂತರ ನೀನು ನನ್ನನ್ನು ಹಿಂಬಾಲಿಸುವೆ” ಎಂದನು. 37 § 13:37 ಮತ್ತಾ 26:33-35; ಮಾರ್ಕ 14:29-31; ಲೂಕ 22:33,34:ಪೇತ್ರನು ಆತನಿಗೆ, “ಕರ್ತನೇ, ನಾನು ಈಗ ನಿನ್ನನ್ನು ಏಕೆ ಹಿಂಬಾಲಿಸಲಾರೆನು? ನಿನಗಾಗಿ ನನ್ನ ಪ್ರಾಣವನ್ನೇ ಕೊಡುವೆನು” ಎಂದು ಹೇಳಿದನು. 38 ಆಗ ಯೇಸು ಅವನಿಗೆ, “ನೀನು ನನಗಾಗಿ ಪ್ರಾಣವನ್ನೇ ಕೊಡುವೆಯಾ? ನಿನಗೆ ನಿಜನಿಜವಾಗಿ ಹೇಳುತ್ತೇನೆ: ನೀನು ನನ್ನನ್ನು ಮೂರು ಸಾರಿ ನಿರಾಕರಿಸುವ ತನಕ ಕೋಳಿಯು ಕೂಗುವುದೇ ಇಲ್ಲ” ಎಂದನು.
*13:2 13:2 ಯೋಹಾ 13:27; ಲೂಕ 22:3:
†13:18 13:18 ಕೀರ್ತ 41:9:
‡13:21 13:21 ಮತ್ತಾ 26:21-25; ಮಾರ್ಕ 14:18-20; ಲೂಕ 22:21-23:
§13:31 13:31 ಯೋಹಾ 14:13; 15:8; 17:1,4:
*13:32 13:32 ಯೋಹಾ 17:1,5; 12:23:
†13:33 13:33 ಯೋಹಾ 7:33,34; 14:19; 16:16:
‡13:34 13:34 ರೋಮಾ. 13:8; 1 ಯೋಹಾ 3:23:
§13:37 13:37 ಮತ್ತಾ 26:33-35; ಮಾರ್ಕ 14:29-31; ಲೂಕ 22:33,34: