60
ಅಪಜಯ ಹೊಂದಿದವರು ಜಯಕ್ಕಾಗಿ ಪ್ರಾರ್ಥಿಸುವುದು
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಷೂಷನ್ ಎದೂತೆಂಬ ರಾಗ; ದಾವೀದನು ಅರಾಮ್ ರಾಜ್ಯಗಳ ಸಂಗಡ ಯುದ್ಧ ಮಾಡುವಷ್ಟರೊಳಗೆ ಯೋವಾಬನು ಹಿಂದಿರುಗಿ ಹೋಗಿ ಉಪ್ಪಿನ ತಗ್ಗಿನಲ್ಲಿ ಹನ್ನೆರಡು ಸಾವಿರ ಎದೋಮ್ಯರನ್ನು ಹೊಡೆದಾಗ ದಾವೀದನು ರಚಿಸಿದ ಕಾವ್ಯ. ಬಾಯಿಪಾಠ ಮಾಡಿಸತಕ್ಕದ್ದು.
1 ದೇವರೇ, ನೀನು ನಮ್ಮನ್ನು ಕೋಪದಿಂದ ತಳ್ಳಿ ಕೆಡವಿಬಿಟ್ಟಿದ್ದೀ;
ನಮ್ಮ ರಕ್ಷಣಾ ಸಾಧನವನ್ನು ಮುರಿದುಬಿಟ್ಟಿದ್ದೀ;
ನಮ್ಮನ್ನು ಪುನಃ ಸ್ಥಿರವಾಗಿ ನಿಲ್ಲಿಸು.
2 ನೀನು ದೇಶವನ್ನು ಕಂಪನಗೊಳಿಸಿ ಒಡೆದುಬಿಟ್ಟಿದ್ದೀ;
ಅದು ನಡುಗುತ್ತಿರುವುದಲ್ಲಾ.
ಅದರ ಒಡಕುಗಳನ್ನು ಸರಿಮಾಡು;
3 ನಿನ್ನ ಜನರನ್ನು ಸಂಕಟಕ್ಕೆ ಗುರಿಪಡಿಸಿದ್ದೀ;
ನೀನು ನಮಗೆ ರೋಷವೆಂಬ ಪಾತ್ರೆಯಿಂದ ಪಾನಮಾಡಿಸಿದಿ.
4 ನೀನು ನಿನ್ನ ಭಕ್ತರಿಗೆ ಧ್ವಜವನ್ನು ಕೊಟ್ಟಿದ್ದು,
ಆದ್ದರಿಂದ ಅವರು ಬಿಲ್ಲಿನಿಂದ* 60:4 ಬಿಲ್ಲಿನಿಂದ ಅಥವಾ ಸತ್ಯದ ನಿಮಿತ್ತ ಅವರು ತಪ್ಪಿಸಿಕೊಳ್ಳುತ್ತಾರೆ. ತಪ್ಪಿಸಿಕೊಳ್ಳಬಹುದು.
ಸೆಲಾ
5 ನಿನ್ನ ಪ್ರಿಯರಾದ ನಮ್ಮ ಮೊರೆಯನ್ನು ಲಾಲಿಸಿ ರಕ್ಷಿಸು.
ನಿನ್ನ ಭುಜಬಲದಿಂದ ನಮ್ಮನ್ನು ಜಯಗೊಳಿಸು.
6 ದೇವರು ತನ್ನ ಪವಿತ್ರಸ್ಥಳದಲ್ಲಿ† 60:6 ಪವಿತ್ರಸ್ಥಳದಲ್ಲಿ ಅಥವಾ ಪವಿತ್ರತ್ವವನ್ನು ಸಾಕ್ಷಿಯಾಗಿ. ನುಡಿದಿದ್ದಾನೆ.
ಜಯಘೋಷಮಾಡುವೆನು;
ಶೆಖೆಮ್ ಪ್ರದೇಶವನ್ನು ಹಂಚುವೆನು.
ಸುಖೋತ್ ಬಯಲನ್ನು ಅಳೆದುಕೊಡುವೆನು.
7 ಗಿಲ್ಯಾದ್ ಸೀಮೆಯೂ ಮತ್ತು ಮನಸ್ಸೆಯ ದೇಶವೂ ನನ್ನವು;
ಎಫ್ರಾಯೀಮ್ ಗೋತ್ರವು ನನಗೆ ಶಿರಸ್ತ್ರಾಣ.
ನನ್ನ ರಾಜದಂಡವು ಯೆಹೂದ ಕುಲವೇ.
8 ಮೋವಾಬ್ ಪ್ರದೇಶವು ನನ್ನ ಸ್ನಾನಪಾತ್ರೆಯು;
ಎದೋಮ್ ಸೀಮೆ ನನ್ನ ಪಾದರಕ್ಷೆಗಳನ್ನು ಬಿಡುವ ಸ್ಥಳ.
‡ 60:8 ಓ ಫಿಲಿಷ್ಟಿಯ ದೇಶವೇ ನೀನು ನನ್ನ ವಿಷಯವಾಗಿ ಜಯಘೋಷ ಮಾಡುವಿ.ಫಿಲಿಷ್ಟಿಯ ದೇಶವೇ ನಾನು ನಿನ್ನ ಮೇಲೆ ಜಯಹೊಂದಿ ನಿನ್ನ ವಿಷಯವಾಗಿ ಜಯಘೋಷ ಮಾಡುವೆನು.
9 ಕೋಟೆಕೊತ್ತಲುಗಳುಳ್ಳ ನಗರಕ್ಕೆ
ನನ್ನನ್ನು ಕರೆದುಕೊಂಡು ಹೋಗುವವರು ಯಾರು?
ಎದೋಮ್ ಪ್ರಾಂತ್ಯದೊಳಗೆ ನನ್ನನ್ನು ಸೇರಿಸುವವರು ಯಾರು?
10 ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ!
ದೇವರೇ, ನಮ್ಮನ್ನು ಕೈಬಿಟ್ಟಿರುವೆಯಾ?
11 ನಮಗೆ ಕೈನೀಡಿ ಶತ್ರುಬಾಧೆಯಿಂದ ಪಾರುಮಾಡು;
ಮನುಷ್ಯರ ಸಹಾಯವು ವ್ಯರ್ಥ.
12 ದೇವರ ಸಹಾಯದಿಂದ ಶೂರಕೃತ್ಯಗಳನ್ನು ನಡೆಸುವೆವು;
ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ.