ಕೀರ್ತನೆಗಳು. 1. ಯಾರು ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ, ಧರ್ಮನಿಂದಕರೊಡನೆ ಕುಳಿತುಕೊಳ್ಳದೆ, ಯೆಹೋವನ ಧರ್ಮಶಾಸ್ತ್ರದಲ್ಲಿ ಸಂತೋಷಿಸುತ್ತಾ, ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವವನು ಎಷ್ಟೋ ಧನ್ಯನು. ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗೆ ಅವನಿರುವನು. ಅಂಥ ಮರವು ಸೂಕ್ತಕಾಲದಲ್ಲಿ ಫಲಕೊಡುತ್ತದಲ್ಲಾ. ಅದರ ಎಲೆ ಬಾಡುವುದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು. ದುಷ್ಟರೋ ಹಾಗಲ್ಲ; ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತೆ ಇದ್ದಾರೆ. ಆದುದರಿಂದ ದುಷ್ಟರು ನ್ಯಾಯವಿಚಾರಣೆಯಲ್ಲಿಯೂ, ಪಾಪಾತ್ಮರು ನೀತಿವಂತರ ಸಭೆಯಲ್ಲಿಯೂ ನಿಲ್ಲುವುದಿಲ್ಲ. ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸುವನು; ದುಷ್ಟರ ಮಾರ್ಗವೋ ನಾಶವಾಗುವುದು.