ಕೀರ್ತ. 97. ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಭೂಲೋಕವು ಸಂತೋಷಿಸಲಿ; ಸಮುದ್ರದ ತೀರಪ್ರದೇಶಗಳೆಲ್ಲಾ ಹರ್ಷಿಸಲಿ. ಮೋಡಗಳೂ, ಕಾರ್ಗತ್ತಲೆಯೂ ಆತನ ಸುತ್ತಲೂ ಇರುತ್ತವೆ; ಯೆಹೋವನು ನೀತಿ ಮತ್ತು ನ್ಯಾಯಗಳಿಂದ ಆಳುತ್ತಾನೆ. ಬೆಂಕಿಯು ಆತನ ಮುಂದೆ ಹೋಗಿ, ಸುತ್ತಲೂ ಆವರಿಸಿ ಆತನ ವೈರಿಗಳನ್ನು ದಹಿಸಿಬಿಡುತ್ತದೆ. ಆತನ ಮಿಂಚುಗಳು ಲೋಕವನ್ನು ಬೆಳಗಿಸಿದವು; ಭೂಮಿಯು ಅದನ್ನು ಕಂಡು ನಡುಗಿತು. ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ ಪರ್ವತಗಳು ಮೇಣದಂತೆ ಕರಗಿಹೋದವು. ಗಗನಮಂಡಲವು ಆತನ ನೀತಿಯನ್ನು ಪ್ರಸಿದ್ಧಪಡಿಸಿತು; ಎಲ್ಲಾ ಜನರು ಆತನ ಮಹಿಮೆಯನ್ನು ಕಂಡರು. ವಿಗ್ರಹಗಳಲ್ಲಿ ಹಿಗ್ಗುವವರೂ, ಮೂರ್ತಿಪೂಜಕರೆಲ್ಲರೂ ನಾಚಿಕೆಗೆ ಒಳಪಡುವರು; ದೇವರುಗಳೆಂದು ಕರೆಯಲ್ಪಡುವವರೇ, ನೀವೆಲ್ಲರೂ ಆತನಿಗೆ ಅಡ್ಡಬೀಳಿರಿ. ಯೆಹೋವನೇ, ನೀನು ನ್ಯಾಯಸ್ಥಾಪಿಸಿದ ವಾರ್ತೆಯನ್ನು ಕೇಳಿ ಚೀಯೋನ್ ಪಟ್ಟಣವು ಹರ್ಷಿಸಿತು; ಯೆಹೂದ ಪ್ರಾಂತ್ಯದ ಊರುಗಳು ಸಂತೋಷಿಸಿದವು. ಯೆಹೋವನೇ, ನೀನು ಭೂಲೋಕದ ಸರ್ವಾಧಿಕಾರಿ; ಎಲ್ಲಾ ದೇವರುಗಳಲ್ಲಿ ಮಹೋನ್ನತನು ನೀನೇ. ಕೆಟ್ಟತನವನ್ನು ಹಗೆಮಾಡುವವರನ್ನು, ಯೆಹೋವನನ್ನು ಪ್ರೀತಿಸುತ್ತಾನೆ. ಆತನು ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ, ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು. ನೀತಿವಂತರಿಗೋಸ್ಕರ ಬೆಳಕು ಪ್ರಕಾಶಿಸುವುದು, ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಕೊಡಲ್ಪಟ್ಟಿವೆ. ನೀತಿವಂತರೇ, ಯೆಹೋವನಲ್ಲಿ ಆನಂದಿಸಿರಿ; ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ.