ಕೀರ್ತ. 126. ಯಾತ್ರಾಗೀತೆ. ಸೆರೆಯಲ್ಲಿದ್ದ ನಮ್ಮನ್ನು ಯೆಹೋವನು ತಿರುಗಿ ಚೀಯೋನಿಗೆ ಬರಮಾಡಿದಾಗ, ನಾವು ಕನಸು ಕಂಡವರಂತೆ ಇದ್ದೆವು. ಆಗ ನಮ್ಮ ಬಾಯಿ ಬಲು ನಗೆಯಿಂದಲೂ, ನಮ್ಮ ನಾಲಿಗೆ ಹರ್ಷಗೀತದಿಂದಲೂ ತುಂಬಿದವು. ಅನ್ಯಜನರು, “ಯೆಹೋವನು ಇವರಿಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದ್ದಾನೆ” ಎಂದು ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದ್ದು ನಿಜ; ಆದುದರಿಂದ ನಾವು ಸಂತೋಷವುಳ್ಳವರಾಗಿದ್ದೇವೆ. ಯೆಹೋವನೇ, ನೀನು ದಕ್ಷಿಣದೇಶದ ಹಳ್ಳಗಳನ್ನೋ ಎಂಬಂತೆ, ಸೆರೆಯಲ್ಲಿ ಉಳಿದಿರುವ ನಮ್ಮವರನ್ನೂ ತಿರುಗಿ ಬರಮಾಡು. ಅಳುತ್ತಾ ಬಿತ್ತುವವರು, ಹಾಡುತ್ತಾ ಕೊಯ್ಯುವರು, ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು, ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು.