ಕೀರ್ತನೆಗಳು. 80. ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. “ಒಡಂಬಡಿಕೆಯ ಲಿಲಿಹೂಗಳು” ಎಂಬ ರಾಗ. ಆಸಾಫನ ಕೀರ್ತನೆ. ಮಂದೆಯಂತೆ ಯೋಸೇಫ್ಯರನ್ನು ನಡೆಸುವ ಇಸ್ರಾಯೇಲರ ಕುರುಬ ಆಗಿರುವ ದೇವರೇ, ಕಿವಿಗೊಡಿರಿ. ಕೆರೂಬಿಗಳ ಮಧ್ಯದಲ್ಲಿ ಆಸೀನವಾಗಿರುವ ದೇವರೇ ಪ್ರಕಾಶಿಸಿರಿ. ಎಫ್ರಾಯೀಮ್, ಬೆನ್ಯಾಮೀನ್, ಮನಸ್ಸೆಯರ ಮುಂದೆ ನಿಮ್ಮ ಪರಾಕ್ರಮವನ್ನು ತೋರಿಸಲು ಬಂದು ನಮ್ಮನ್ನು ರಕ್ಷಿಸಿರಿ. ದೇವರೇ, ನಮ್ಮನ್ನು ಪುನಃ ಸ್ಥಾಪಿಸಿರಿ. ನಿಮ್ಮ ಮುಖ ನಮ್ಮ ಮೇಲೆ ಪ್ರಕಾಶಿಸುವಂತೆ ಮಾಡಿರಿ. ಆಗ ನಾವು ರಕ್ಷಣೆ ಹೊಂದುವೆವು. ಸರ್ವಶಕ್ತ ದೇವರಾಗಿರುವ ಯೆಹೋವ ದೇವರೇ, ಎಷ್ಟರವರೆಗೆ ನಿಮ್ಮ ಜನರ ಪ್ರಾರ್ಥನೆಗೆ ವಿರೋಧವಾಗಿ ಬೇಸರಗೊಳ್ಳುವಿರಿ? ರೋದನವೇ ನಮ್ಮ ಅನ್ನವಾಗುವಂತೆಯೂ ಅಶ್ರುಧಾರೆಯೇ ಪಾನವಾಗುವಂತೆಯೂ ಅನುಮತಿಸಿದ್ದೀರಿ. ನಮ್ಮ ನೆರೆಯವರ ವಿವಾದಕ್ಕೆ ನಮ್ಮನ್ನು ಗುರಿಮಾಡಿದ್ದೀರಿ. ನಮ್ಮ ಶತ್ರುಗಳು ನಮ್ಮನ್ನು ಅಪಹಾಸ್ಯ ಮಾಡುತ್ತಾರೆ. ಸರ್ವಶಕ್ತರಾದ ದೇವರೇ, ನೀವು ನಮ್ಮನ್ನು ಪುನಃ ಸ್ಥಾಪಿಸಿರಿ. ನಿಮ್ಮ ಮುಖ ನಮ್ಮ ಮೇಲೆ ಪ್ರಕಾಶಿಸುವಂತೆ ಮಾಡಿರಿ. ಆಗ ನಾವು ರಕ್ಷಣೆ ಹೊಂದುವೆವು. ನೀವು ದ್ರಾಕ್ಷಾಲತೆಯನ್ನು ಈಜಿಪ್ಟಿನಿಂದ ತಂದು, ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿದ್ದೀರಿ. ಅದಕ್ಕಾಗಿ ಸ್ಥಳ ಸಿದ್ಧಮಾಡಿದಿರಿ. ಆಗ ಅದು ಬೇರೂರಿ ದೇಶವನ್ನು ತುಂಬಿತು. ಅದರ ನೆರಳಿನಿಂದ ಬೆಟ್ಟಗಳೂ ಅದರ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲಾದವು. ಅದು ತನ್ನ ರೆಂಬೆಗಳನ್ನು ಸಮುದ್ರದವರೆಗೂ, ತನ್ನ ಬಳ್ಳಿಗಳನ್ನು ನದಿಯವರೆಗೂ ಹರಡಿಸಿತು. ಮಾರ್ಗದಲ್ಲಿ ಹಾದುಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಏಕೆ ಅದರ ಬೇಲಿಗಳನ್ನು ನೀವು ಮುರಿದುಬಿಟ್ಟಿದ್ದೀರಿ? ಅಡವಿಯಿಂದ ಬಂದ ಹಂದಿಗಳು ಅದನ್ನು ಹಾಳು ಮಾಡುತ್ತವೆ; ಕಾಡಿನ ಮೃಗಗಳು ಅದನ್ನು ತಿಂದು ಹಾಕುತ್ತವೆ. ಸೇನಾಧೀಶ್ವರ ದೇವರೇ, ನಿಮ್ಮ ದರ್ಶನವಾಗಲಿ. ನೀವು ಪರಲೋಕದಿಂದ ಕಟಾಕ್ಷಿಸಿರಿ. ಈ ದ್ರಾಕ್ಷಾಲತೆಯನ್ನು ಪರಾಮರಿಸಿರಿ. ನಿಮ್ಮ ಬಲಗೈ ನೆಟ್ಟ ಸಸಿಯನ್ನೂ ನೀವು ನಿಮಗೆ ಬೆಳಸಿಕೊಂಡ ಬಳ್ಳಿಯನ್ನೂ ಪರಾಮರಿಸಿರಿ. ನಿಮ್ಮ ದ್ರಾಕ್ಷಿಬಳ್ಳಿ ಕಡಿದು ಬೆಂಕಿಯಿಂದ ಸುಡಲಾಗಿದೆ. ನೀವು ಖಂಡಿಸಲು ನಿಮ್ಮ ಜನರು ಬಾಧಿತರಾಗಿ ಹೋಗುವರು. ನಿಮ್ಮ ಬಲಗಡೆಯಲ್ಲಿರುವಾತನ ಮೇಲೆ ನಿಮ್ಮ ಹಸ್ತವಿರಲಿ. ನಿಮಗಾಗಿ ಆ ನರಪುತ್ರನನ್ನು ಎಬ್ಬಿಸಿದ್ದೀರಿ. ಆಗ ನಾವು ನಿಮ್ಮಿಂದ ತೊಲಗುವುದಿಲ್ಲ. ನಮ್ಮನ್ನು ಉಜ್ಜೀವಿಸಿರಿ, ಆಗ ನಿಮ್ಮ ಹೆಸರನ್ನು ಕರೆಯುವೆವು. ಸರ್ವಶಕ್ತರಾದ ದೇವರೇ, ನೀವು ನಮ್ಮನ್ನು ಪುನಃ ಸ್ಥಾಪಿಸಿರಿ. ನಿಮ್ಮ ಮುಖ ನಮ್ಮ ಮೇಲೆ ಪ್ರಕಾಶಿಸುವಂತೆ ಮಾಡಿರಿ. ಆಗ ನಾವು ರಕ್ಷಣೆ ಹೊಂದುವೆವು.