ಕೀರ್ತನೆಗಳು. 87. ಕೋರಹೀಯರ ಕೀರ್ತನೆ. ಒಂದು ಗೀತೆ. ಯೆಹೋವ ದೇವರು ತಮ್ಮ ಪಟ್ಟಣದ ಅಸ್ತಿವಾರವನ್ನು ಪರಿಶುದ್ಧ ಪರ್ವತದಲ್ಲಿ ಸ್ಥಾಪಿಸಿದ್ದಾರೆ. ದೇವರು ಚೀಯೋನಿನ ದ್ವಾರಗಳನ್ನು ಯಾಕೋಬನ ಎಲ್ಲಾ ನಿವಾಸಗಳಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಾರೆ. ದೇವರ ಪಟ್ಟಣವೇ, ನಿನ್ನ ವಿಷಯವಾದ ಮಹಿಮೆಯು ಏನೆಂದರೆ, “ರಾಹಬ್, ಬಾಬೆಲ್ ದೇಶಗಳವರನ್ನು, ನನ್ನನ್ನು ಬಲ್ಲವರಲ್ಲಿ ಎಣಿಸುವೆನು. ಇಗೋ, ಫಿಲಿಷ್ಟಿಯ, ಟೈರ್, ಕೂಷ್ ಜನಾಂಗಗಳು, ‘ಚೀಯೋನಿನಲ್ಲೇ ಹುಟ್ಟಿದವು.’ ” ಚೀಯೋನಿನ ವಿಷಯವಾಗಿ, “ಸಕಲ ಜನಾಂಗದವರೂ ಚೀಯೋನಿನಲ್ಲಿ ಹುಟ್ಟಿದರು. ಮಹೋನ್ನತರೇ ಅದನ್ನು ಸ್ಥಿರಪಡಿಸುವರು,” ಎಂದು ಹೇಳುವರು. ಯೆಹೋವ ದೇವರು ಜನಾಂಗಗಳ ಗ್ರಂಥದಲ್ಲಿ ಬರೆಯುವಾಗ, “ಚೀಯೋನಿನಲ್ಲಿ ಇವನು ಹುಟ್ಟಿದನು,” ಎಂದು ಬರೆಯುವರು. “ನನ್ನ ಎಲ್ಲಾ ಬುಗ್ಗೆಗಳು ನಿಮ್ಮಲ್ಲಿಯೇ ಇವೆ,” ಎಂದು ಸಂಗೀತಕಾರರು ಹಾಡುವರು.