ದ್ವಿತೀಯ ಭಾಗವು 42 - 72
42
ದೇಶಾಂತರದಲ್ಲಿರುವ ಭಕ್ತನು ದೇವದರ್ಶನಕ್ಕಾಗಿ ಹಂಬಲಿಸುವುದು. ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಪದ್ಯ.
1 ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಹೇಗೋ,
ಹಾಗೆಯೇ ನನ್ನ ಮನಸ್ಸು ನಿನ್ನನ್ನು ಬಯಸುತ್ತದೆ.
2 ನನ್ನ ಮನಸ್ಸು ದೇವರಿಗಾಗಿ, ಚೈತನ್ಯಸ್ವರೂಪನಾದ ದೇವರಿಗಾಗಿ ಹಾರೈಸುತ್ತದೆ;
ನಾನು ಯಾವಾಗ ಹೋಗಿ ದೇವರ ಸನ್ನಿಧಿಯಲ್ಲಿ ಸೇರುವೆನೋ?
3 “ನಿನ್ನ ದೇವರು ಎಲ್ಲಿ?” ಎಂದು ಜನರು
ಯಾವಾಗಲೂ ನನ್ನನ್ನು ಪರಿಹಾಸ್ಯ ಮಾಡುವುದರಿಂದ,
ಹಗಲಿರುಳು ನನಗೆ ಕಣ್ಣೀರೇ ಆಹಾರವಾಯಿತು.
4 ನಾನು ಭಜನೋತ್ಸವದಲ್ಲಿ ಸೇರಿ,
ಜನಸಮೂಹದೊಡನೆ ಹರ್ಷಧ್ವನಿಮಾಡುತ್ತಾ, ಸ್ತೋತ್ರಪದಗಳನ್ನು ಹಾಡುತ್ತಾ,
ದೇವಾಲಯಕ್ಕೆ ಹೋಗುತ್ತಿದ್ದದ್ದನ್ನೇ ನೆನಪಿಗೆ ತಂದುಕೊಂಡು,
ನನ್ನೊಳಗೆ ನಾನೇ ಹಂಬಲಿಸುತ್ತಿರುವೆನು.
5 ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು?
ಹೀಗೆ ವ್ಯಥೆಪಡುವುದೇಕೆ?
ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ.
ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.
6 ನನ್ನ ದೇವರೇ, ನನ್ನ ಪ್ರಾಣವು ಕುಗ್ಗಿಹೋಗಿದೆ;
ಆದುದರಿಂದ ಯೊರ್ದನ್ ಹೊಳೆಯ ದೇಶ,
ಹೆರ್ಮೋನ್ ಪರ್ವತ, ಮಿಸಾರ್ ಬೆಟ್ಟ ಇವುಗಳಲ್ಲಿರುವವನಾಗಿ ನಿನ್ನನ್ನು ಸ್ಮರಿಸುತ್ತೇನೆ.
7 ನಿನ್ನ ಜಲಪಾತಗಳಿಂದ ಉಂಟಾಗುವ ಮಹಾಘೋಷವು
ಒಂದು ಪ್ರವಾಹವು ಮತ್ತೊಂದು ಪ್ರವಾಹವನ್ನು ಕರೆಯುತ್ತದೋ ಎಂಬಂತಿರುವುದು.
ಹಾಗೆಯೇ ನೀನು ಅಲ್ಲಕಲ್ಲೋಲವಾದ ದುಃಖ ಪ್ರವಾಹದ ತೆರೆಗಳನ್ನು
ನನ್ನ ತಲೆಯ ಮೇಲಿಂದ ದಾಟಿಸಿದಿಯಲ್ಲಾ.
8 ಯೆಹೋವನು ಹಗಲಿನಲ್ಲಿ ತನ್ನ ಪ್ರೀತಿಯನ್ನು ನನಗೆ ಅನುಗ್ರಹಿಸುವನು;
ರಾತ್ರಿ ವೇಳೆಯಲ್ಲಿಯೂ ಆತನ ಕೀರ್ತನೆ ನನ್ನಲ್ಲಿರುವುದು.
ನನ್ನ ಜೀವಾಧಾರಕನಾದ ದೇವರನ್ನು ಪ್ರಾರ್ಥಿಸುವೆನು.
9 ನಾನು ನನ್ನ ಶರಣನಿಗೆ, “ದೇವರೇ, ಏಕೆ ನನ್ನನ್ನು ಮರೆತುಬಿಟ್ಟಿದ್ದಿ?
ನಾನು ಏಕೆ ಶತ್ರುಬಾಧೆಯಿಂದ ದುಃಖಿಸುತ್ತಾ ವಿಕಾರಿಯಾಗಿ ಅಲೆಯಬೇಕು?” ಎಂದು ಮೊರೆಯಿಡುವೆನು.
10 ನನ್ನ ವಿರೋಧಿಗಳು, “ನಿನ್ನ ದೇವರು ಎಲ್ಲಿ?” ಎಂದು ಯಾವಾಗಲೂ ನನ್ನನ್ನು ಪರಿಹಾಸ್ಯ ಮಾಡುವುದರಿಂದ
ನನ್ನ ಎಲುಬುಗಳೆಲ್ಲಾ ಮುರಿದ ಹಾಗಿವೆ.
11 ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು?
ಹೀಗೆ ವ್ಯಥೆಪಡುವುದೇಕೆ? ದೇವರನ್ನು ನಿರೀಕ್ಷಿಸು;
ಆತನೇ ನನಗೆ ರಕ್ಷಕನೂ, ದೇವರೂ ಆಗಿದ್ದಾನೆ;
ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.