43
1 ದೇವರೇ, ನ್ಯಾಯವನ್ನು ತೀರಿಸು;
ನನಗೋಸ್ಕರ ವ್ಯಾಜ್ಯವನ್ನು ನಡೆಸಿ ಭಕ್ತಿ ಇಲ್ಲದ ಜನಾಂಗದಿಂದ ತಪ್ಪಿಸು,
ದುರಾಚಾರಿಗಳಾದ ಮೋಸಗಾರರಿಂದ ನನ್ನನ್ನು ಬಿಡಿಸು.
2 ದೇವರೇ, ನೀನು ನನಗೆ ದುರ್ಗಸ್ಥಾನವಲ್ಲವೇ;
ಏಕೆ ನನ್ನನ್ನು ತಳ್ಳಿಬಿಟ್ಟೆ?
ನಾನು ಏಕೆ ಶತ್ರುಬಾಧೆಯಿಂದ ದುಃಖಿಸುತ್ತಾ ವಿಕಾರಿಯಾಗಿ ಅಲೆಯಬೇಕು?
3 ನಿನ್ನ ಬೆಳಕನ್ನು, ನಿನ್ನ ಸತ್ಯಪ್ರಸನ್ನತೆಗಳನ್ನು ಕಳುಹಿಸು;
ಅವು ನಿನ್ನ ಪರಿಶುದ್ಧಪರ್ವತಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನಿನ್ನ ನಿವಾಸಕ್ಕೆ ಬರಮಾಡಲಿ.
4 ದೇವರೇ, ನನ್ನ ದೇವರೇ, ಆಗ ನಾನು ನಿನ್ನ ಯಜ್ಞವೇದಿಯ ಬಳಿಗೆ,
ನನ್ನ ಆನಂದನಿಧಿಯಾಗಿರುವ ನಿನ್ನ ಹತ್ತಿರಕ್ಕೆ ಸೇರಿ,
ಕಿನ್ನರಿಯನ್ನು ನುಡಿಸುತ್ತಾ ನಿನ್ನನ್ನು ಕೊಂಡಾಡುವೆನು.
5 ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು? ಹೀಗೆ ವ್ಯಥೆಪಡುವುದೇಕೆ?
ದೇವರನ್ನು ನಿರೀಕ್ಷಿಸು;
ಆತನೇ ನನಗೆ ರಕ್ಷಕನೂ, ದೇವರೂ ಆಗಿದ್ದಾನೆ;
ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.